ಇಷ್ಟೊಂದು ಮೊತ್ತದ ನಗದು ಬ್ಯಾಂಕ್ ಖಾತೆಯಲ್ಲಿ ಇರಿಸಿದರೆ ಐಟಿ ನೋಟಿಸ್ ಬರುವುದು ಖಂಡಿತಾ
Wednesday, January 8, 2025
ಬ್ಯಾಂಕ್ ಖಾತೆಗಳಲ್ಲಿ ನಾವಿರಿಸುವ ನಗದು ಸುರಕ್ಷಿತವಾಗಿರುವುದು ಮಾತ್ರವಲ್ಲ, ಅದರ ಮೇಲೆ ಬಡ್ಡಿಯೂ ದೊರಕುತ್ತದೆ. ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ಹೆಚ್ಚಿನ ಮಂದಿ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ವಿಶೇಷವೆಂದರೆ ಭಾರತದಲ್ಲಿ ಉಳಿತಾಯ ಖಾತೆ ತೆರೆಯಲು ಯಾವುದೇ ಮಿತಿಯಿಲ್ಲ. ಅಂದರೆ ಓರ್ವ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಗಳನ್ನು ಬೇಕಾದರೂ ತೆರೆಯಬಹುದು.
ಆದರೆ ಓರ್ವ ವ್ಯಕ್ತಿಯು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಹೊರತುಪಡಿಸಿ, ಇತರ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
ಉಳಿತಾಯ ಖಾತೆಯಲ್ಲಿ ಹಣವನ್ನು ಇಡಲು ಯಾವುದೇ ಮಿತಿಯಿಲ್ಲದಿರಬಹುದು. ಆದರೆ ನೀವು ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂ.ಗಿಂತ ಅಧಿಕ ಠೇವಣಿ ಇಟ್ಟಲ್ಲಿ, ಬ್ಯಾಂಕ್‌ಗಳು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ (CBDT) ತಿಳಿಸುತ್ತವೆ. ಇದೇ ನಿಯಮವು ಎಫ್‌ಡಿಯಲ್ಲಿನ ನಗದು ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಷೇರುಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ.
ಲೈವ್ ಮಿಂಟ್ ವರದಿಯ ಪ್ರಕಾರ, ತೆರಿಗೆ ಮತ್ತು ಹೂಡಿಕೆ ಸಲಹೆಗಾರ ಬಲ್ವಂತ್ ಜೈನ್ ಅವರು ಭಾರತೀಯರು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎಂದು ಹೇಳುತ್ತಾರೆ. ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಆದಾಯ ತೆರಿಗೆ ಕಾಯಿದೆ ಅಥವಾ ಬ್ಯಾಂಕಿಂಗ್ ನಿಯಮಗಳಲ್ಲಿ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಬ್ಯಾಂಕ್ ಖಾತೆದಾರರು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಇರಿಸಲಾದ ಮೊತ್ತದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಬಡ್ಡಿಯ ಮೇಲೆ 10 ಪ್ರತಿಶತ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಆದರೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು ಎಂದು ಬಲ್ವಂತ್ ಜೈನ್ ಹೇಳುತ್ತಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTA ಪ್ರಕಾರ, ಎಲ್ಲಾ ವ್ಯಕ್ತಿಗಳು 10,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 10 ಸಾವಿರಕ್ಕಿಂತ ಕಡಿಮೆ ಬಡ್ಡಿ ಬಂದರೆ ತೆರಿಗೆ ಕಟ್ಟಬೇಕಾಗಿಲ್ಲ. ಅದೇ ರೀತಿ 60 ವರ್ಷ ಮೇಲ್ಪಟ್ಟ ಖಾತೆದಾರರು 50 ಸಾವಿರ ರೂ.ವರೆಗಿನ ಬಡ್ಡಿಗೆ ತೆರಿಗೆ ಪಾವತಿಸಬೇಕಾಗಿಲ್ಲ.