ತನ್ನ ತಾಯಿ-ಸಹೋದರಿಯರನ್ನು ಕೊಲೆಗೈದಿರುವುದು ಇದೇ ಕಾರಣಕ್ಕೆ - ಆರೋಪಿ ಬಿಚ್ಚಿಟ್ಟ ಕರಾಳ ಸತ್ಯ ವೀಡಿಯೋದಲ್ಲಿದೆ
Thursday, January 2, 2025
ಲಖನೌ: ಹೊಸವರ್ಷದಂದೇ ಉತ್ತರ ಪ್ರದೇಶದಲ್ಲಿ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಭೀಕರವಾಗಿ ಯುವಕನೋರ್ವನು ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅರ್ಷದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಆರೋಪಿ ಕೊಲೆಗೂ ಮುನ್ನ ಮಾತನಾಡಿರುವ ವೀಡಿಯೋ ಒಂದು ಪೊಲೀಸರಿಗೆ ಲಭಿಸಿದ್ದು, ಕೊಲೆಗೆ ಕಾರಣವನ್ನು ಕೇಳಿ ಶಾಕ್ ಆಗಿದ್ದಾರೆ.
ತಾಯಿ ಅಸ್ಮಾ ಹಾಗೂ ಪುತ್ರಿಯರಾದ ಅಲಿಯಾ (9), ಅಲ್ಕಿಯಾ (19), ಅಕ್ಷಾ (16) ಮತ್ತು ರಹಮೀನ್ (18) ಮೃತಪಟ್ಟರು. ಆರೋಪಿ ಅರ್ಷದ್ ಕೊಲೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದರ ಕುರಿತು ವಿಡಿಯೋ ಒಂದನ್ನು ಮಾಡಿದ್ದಾನೆ. ಅಲ್ಲದೆ ವೀಡಿಯೋದಲ್ಲಿ ತಾನು ತಾಯಿ ಹಾಗೂ ಸಹೋದರಿಯರ ಅವರ ಗೌರವ ಉಳಿಸಿದ್ದೇನೆ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ನೆರೆಹೊರೆಯವರ ಕಿರುಕುಳ ತಾಳಲಾರದೆ ತಾನು ಈ ರೀತಿ ಮಾಡಬೇಕಾಗಿ ಬಂತು. ನಾನು ನನ್ನ ತಾಯಿ ಹಾಗೂ ಸಹೋದರಿಯರನ್ನು ಕೊಂದಿದ್ದೇನೆ. ವಿಡಿಯೋ ಮಾಡುತ್ತಿರುವ ಉದ್ದೇಶವೇನೆಂದರೆ ಈ ವಿಡಿಯೋ ಪೊಲೀಸರಿಗೆ ಸಿಕ್ಕಿದಾಗ ಕೊಲೆಗೆ ಅಸಲಿ ಕಾರಣ ಏನೆಂಬುದು ತಿಳಿಯಬೇಕು. ನಮ್ಮ ಮನೆಯನ್ನು ಸ್ಥಳೀಯ ಮಂದಿ ಲ್ಯಾಂಡ್ ಮಾಫಿಯಾದೊಂದಿಗೆ ಸೇರಿ ವಶಪಡಿಸಿಕೊಂಡಿದ್ದು, ನಾವು ಧ್ವನಿ ಎತ್ತದಂತೆ ಮಾಡಿದ್ದರು.
ಕಳೆದ 15ದಿನಗಳಿಂದ ನಾವು ಮನೆಯಿಲ್ಲದೆ ರಸ್ತೆಯಲ್ಲಿಯೇ ಮಲಗಿ ಜೀವನ ಸಾಗಿಸುತ್ತಿದ್ದೇವೆ. ನನ್ನ ತಾಯಿ ಹಾಗೂ ಸಹೋದರಿಯರು ಚಳಿಯಲ್ಲಿ ಅಲೆದಾಡುವುದು ನನಗೆ ಇಷ್ಟವಿಲ್ಲ. ದಾಖಲೆಗಳು ನಮ್ಮ ಹೆಸರಿನಲ್ಲಿದ್ದರೂ ನಮ್ಮ ಮನೆಯನ್ನು ಸ್ಥಳೀಯರು ಹಾಗೂ ಲ್ಯಾಂಡ್ ಮಾಫಿಯಾದವರು ವಶಪಡಿಸಿಕೊಂಡಿದ್ದಾರೆ. ರಾನು, ಅಫ್ತಾಬ್, ಅಲೀಮ್ ಖಾನ್, ಸಲೀಂ, ಆರಿಫ್, ಅಹ್ಮದ್ ಮತ್ತು ಅಜರ್ ಎಂಬುವವರು ನಮಗೆ ಈ ರೀತಿ ಮಾಡಿದ್ದಾರೆ.
ಇವರು ನನ್ನನ್ನು ಹಾಗೂ ತಾಯಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ನಾಲ್ವರು ಸಹೋದರಿಯರನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದ್ದರಿಂದ ನಾನು ನನ್ನ ಸಹೋದರಿ ಹಾಗೂ ತಾಯಿಯನ್ನು ಕೊಲೆ ಮಾಡುವ ಪರಿಸ್ಥಿತಿ ಎದುರಾಯಿತು. ನಾವು ಸಹಾಯಕ್ಕಾಗಿ ಹಲವರನ್ನು ಭೇಟಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಈ ರೀತಿ ಮಾಡಬೇಕಾಯಿತು. ನಾನು ಇನ್ನೂ ಕೆಲವೇ ಕ್ಷಣಗಳಲ್ಲಿ ಸಾಯುತ್ತೇನೆ. ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರು ನಮಗೆ ನ್ಯಾಯ ಕೊಡಿಸುವ ಭರವಸೆಯಿದೆ. ಭಾರತದಲ್ಲಿ ಯಾವ ಕುಟುಂಬಕ್ಕೂ ಈ ರೀತಿಯಾಗಬಾರದು ಎಂದು ಅರ್ಷದ್ ವಿಡಿಯೋದಲ್ಲಿ ಹೇಳಿದ್ದಾರೆ.