ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚೂರಿಯಿಂದ ಇರಿದು ಪರಾರಿಯಾದ ದುಷ್ಕರ್ಮಿ - ಆಸ್ಪತ್ರೆಗೆ ದಾಖಲು
Thursday, January 16, 2025
ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈಯ ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವನು ಅವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ. ಘಟನೆಯಿಂದ ಗಾಯಗೊಂಡಿರುವ ನಟ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಗುರುವಾರ ನಸುಕುನ ವೇಳೆ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸೈಫ್ ಅಲಿ ಖಾನ್ ಅವರು ತಮ ಪತ್ನಿ ಕರೀನಾ ಕಪೂರ್ ಮತ್ತು ಪುತ್ರರಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಮಲಗಿದ್ದಾಗ ಮನೆಯೊಳಗೆ ಒಳನುಸುಳಿದ ಆಗಂತುಕನೋರ್ವನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅವರಿಗೆ ಎರಡು ಬಾರಿ ಇರಿದು ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು, ಪತ್ನಿ ಕರೀನಾ ಕಪೂರ್ ಮತ್ತು ಪುತ್ರರೊಂದಿಗೆ ಸ್ವಿಟ್ಸರ್ಲೆಂಡ್ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಕಳೆದ ವಾರ ಮುಂಬೈಗೆ ಮರಳಿದ್ದರು.