10ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೆ ಮದುವೆ- ಬಸ್‌ನಲ್ಲಿಯೇ ಪ್ರಿಯತಮೆ ಪತಿಯ ಕೊಲೆಗೈದ ಪ್ರಿಯಕರ
Sunday, February 23, 2025
ಶಿರಸಿ: ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬ ಯುವಕನನ್ನು ಮದುವೆಯಾದ ಸಿಟ್ಟಿಗೆ ಆಕೆಯ ಪತಿಯನ್ನು ಬಸ್ ಪ್ರಯಾಣದಲ್ಲಿದ್ದಾಗಲೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶಿರಸಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಗಂಗಾಧರ್ ಹತ್ಯೆಯಾದ ಯುವಕ. ಶಿರಸಿ ನಗರದ ಸ್ಥಳೀಯ ನಿವಾಸಿ ಪ್ರೀತಮ್ ಡಿಸೋಜ ಕೊಲೆಗೈದ ಅರೊಪಿ. ಕೊಲೆಗೈದ ಬಳಿಕ ಪ್ರೀತಮ್ ಡಿಸೋಜ ಸ್ಥಳದಿಂದ ಪರಾರಿಯಾಗಿದ್ದರೂ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಶಿರಸಿಯ ಯುವತಿ ಹಾಗೂ ಪ್ರೀತಮ್ ಡಿಸೋಜ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಆಕೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದಾಳೆ. ಅಲ್ಲಿ ಅವಳಿಗೆ ಸಾಗರ ಮೂಲದ ಯುವಕ ಗಂಗಾಧರ್ ಪರಿಚಯವಾಗಿದ್ದು, ಇವರಿಬ್ಬರೂ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಪತ್ನಿಯ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಗಂಗಾಧರ್ ಪತ್ನಿಯೊಂದಿಗೆ ಶಿರಸಿಗೆ ಬಂದಿದ್ದ. ಶನಿವಾರ ರಾತ್ರಿ ಮತ್ತೆ ಬೆಂಗಳೂರಿಗೆ ಹಿಂತಿರುಗಲು ಶಿರಸಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಲ್ಲಿ ಕುಳಿತಿದ್ದರು.
ಈ ವೇಳೆ ಪ್ರೀತಮ್ ಕೂಡ ಅದೇ ಬಸ್ಸಿಗೆ ಹತ್ತಿದ್ದು, ಏಕಾಏಕಿ ಗಂಗಾಧರ್‌ನೊಂದಿಗೆ ಜಗಳಕ್ಕಿಳಿದಿದ್ದಾನೆ. ಮಾತಿಗೆ ಮಾತು ಬೆಳೆದು, ಪ್ರೀತಮ್ ಕೈಯಲ್ಲಿದ್ದ ಚೂರಿ ತೆಗೆದು, ಗಂಗಾಧರ್‌ನ ಎದೆಯ ಭಾಗಕ್ಕೆ ಚುಚ್ಚಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿಂಡಿದ್ದ ಗಂಗಾಧರ್ ಆಸ್ಪತ್ರೆ ಒಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಶಿರಸಿ ಡಿಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗಪ್ಪ ಬಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.