ಐದು ವರ್ಷ ಕೆಲಸ ಮಾಡಿದರೂ 100ರೂ. ಸಂಬಳವಿಲ್ಲ: ಆತ್ಮಹತ್ಯೆ ಶರಣಾದ ಶಿಕ್ಷಕಿ, ತನಿಖೆಗೆ ಆದೇಶ
Friday, February 21, 2025
ಕೇರಳ: ಕ್ಯಾಥೋಲಿಕ್ ಸಂಸ್ಥೆಯೊಂದು ನಡೆಸುತ್ತಿರುವ ಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೈದಿರುವ ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿ ಅಲೀನಾ (30) ಕಳೆದ ಐದು ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡಿದ್ದೇ ಆದರೂ ಆಕೆಗೆ ಒಂದು ರೂ. ಕೂಡ ಸಂಬಳ ಕೊಟ್ಟಿಲ್ಲ ಎಂದು ಕುಟುಂಬಸ್ಥರು ಗಂಭೀರ ಆರೋಪ ಹೊರಿಸಿದ್ದಾರೆ.
ಕೇರಳದ ಕೋಝಿಕ್ಕೋಡ್‌ನಲ್ಲಿರುವ ಕೊಡೆಂಚೇರಿಯ ಸೇಂಟ್ ಜೋಸೆಫ್ ಲೋಯರ್ ಪ್ರೈಮರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅಲೀನಾ, ಗುರುವಾರ ಕಟ್ಟಿಪಾರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸರ್ಕಾರಿ ಅನುದಾನಿತ ಸಂಸ್ಥೆಯನ್ನು ತಾಮರಸ್ಸೇರಿಯ ಕ್ಯಾಥೋಲಿಕ್ ಡಯಾಸಿಸ್ ನಿರ್ವಹಿಸುತ್ತಿತ್ತು. ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಅಲೀನಾ ಕಳೆದ 5 ವರ್ಷಗಳಿಂದ ಕೆಲಸ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ಮಗಳಿಗೆ 100 ರೂ. ಕೂಡ ಸಂಬಳ ನೀಡಿಲ್ಲ ಎಂದು ಅಲೀನಾ ತಂದೆ ಬೆನ್ನಿ ಆರೋಪಿಸಿದ್ದಾರೆ. "ಖಾಯಂ ಉದ್ಯೋಗಕ್ಕಾಗಿ ನಾವು ಲಕ್ಷ ಲಕ್ಷ ಹಣ ಪಾವತಿಸಿದ್ದೆವು. ಆದರೆ, ಇವರು ಅದನ್ನೂ ವಾಪಾಸ್ ಮಾಡಲಿಲ್ಲ. ಇತ್ತ ಸಂಬಳವನ್ನೂ ಕೊಡಲಿಲ್ಲ. ಖಾಲಿಯಿದ್ದ ಹುದ್ದೆ ಪುತ್ರಿಗೆ ಸಿಕ್ಕಿತ್ತು. ಆದರೆ, ಅದನ್ನು ವಜಾಗೊಂಡ ವ್ಯಕ್ತಿಗೆ ಮತ್ತೆ ನೀಡಲಾಗಿದೆ. ಇದು ದೊಡ್ಡ ಸಮಸ್ಯೆಗೆ ಕಾರಣವಾಯಿತು. ಚರ್ಚ್ ಸಮಿತಿ ಮಧ್ಯಪ್ರವೇಶಿಸಿ ಆಕೆಗೆ ಶಾಲೆಯಲ್ಲಿ ಉದ್ಯೋಗ ನೀಡಿತು. ಆದ್ರೆ, ಅವಳಿಗೆ ಸಂಬಳ ಮಾತ್ರ ಸಿಗುತ್ತಿರಲಿಲ್ಲ. ಈ ವಿಷಯಕ್ಕೆ ಆಕೆ ಆಗಾಗ್ಗೆ ಕಣ್ಣೀರಿಡುತ್ತಿದ್ದಳು" ಎಂದು ಹೇಳಿದ್ದಾರೆ.
ಅಲೀನಾ ಆತ್ಮಹತ್ಯೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ತಮರಸ್ಸೆರಿ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) 194 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕಿ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಶಿವನ್‌ಕುಟ್ಟಿ, "ತೀರ ದುರದೃಷ್ಟಕರ ಮತ್ತು ದುಃಖಕರ. ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಪೋಷಕರಿಗೆ ಭರವಸೆ ನೀಡಿದರು.