ಮ್ಯಾಟ್ರಿಮಾನಿ ಆ್ಯಪ್‌ನಲ್ಲಿ ಮದುವೆಯಾಗದ ಮಹಿಳೆಯರಿಗೆ ಗಾಳ- ವಿವಾಹವಾಗುವುದಾಗಿ 12ಕ್ಕಿಂತ ಅಧಿಕ ಮಂದಿಗೆ ವಂಚಿಸಿದ ಆರೋಪಿ ಅರೆಸ್ಟ್
Wednesday, February 12, 2025
ಶಿವಮೊಗ್ಗ: ಮ್ಯಾಟ್ರಿಮನಿ ಆ್ಯಪ್‌ನಲ್ಲಿ ಪರಿಚಿತನಾಗಿ ವಿವಾಹವಾಗುವುದಾಗಿ ನಂಬಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಸುಮಾರು 12ಮಹಿಳೆಯರನ್ನು ವಂಚಿಸಿ ಅವರಿಂದ ಚಿನ್ನಾಭರಣ, ಹಣ ಪಡೆದು ಪರಾರಿಯಾಗಿದ್ದ ವಿಜಯಪುರ ಜಿಲ್ಲೆಯ ಮೂಲದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಹಿಟ್ಟಿನಹಳ್ಳಿ ಗ್ರಾಮದ ಜೈಭೀಮ್ ಪಡಕೋಟಿ ಅಲಿಯಾಸ್ ಭೀಮರಾವ್ (38) ಬಂಧಿತ ಆರೋಪಿ.
ಭದ್ರಾವತಿಯ ಮಹಿಳೆಯೊಬ್ಬರಿಂದ 9.70 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಪಡೆದು ವಂಚಿಸಿದ ಬಗ್ಗೆ ದೂರು ದಾಖಲಾಗಿತ್ತು.
ಆರೋಪಿಯ ವಿರುದ್ಧ ವಿಜಯಪುರ ಜಿಲ್ಲೆ ತಿಕೋಟಾ ಗ್ರಾಮೀಣ ಪೊಲೀಸ್ ಠಾಣೆ, ಹೊರ್ತಿ, ಮುದ್ದೇಬಿಹಾಳ, ಬಬಲೇಶ್ವರ, ಬಾಗಲಕೋಟೆ ನಗರ ಠಾಣೆ, ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆ, ಶಿವಮೊಗ್ಗ ಜಿಲ್ಲೆ ಹೊಸನಗರ, ಬೆಂಗಳೂರು ನಗರ ಸಿಇಎನ್ ಠಾಣೆ ಹಾಗೂ ಕೊಪ್ಪಳ ಮಹಿಳಾ ಠಾಣೆಯಲ್ಲಿ 12 ಪ್ರಕರಣ ದಾಖಲಾಗಿವೆ. ಈ ಪೈಕಿ ನಾಲ್ವರು ಮಹಿಳೆಯರನ್ನು ಆರೋಪಿ ಮದುವೆಯಾಗಿದ್ದಾಗಿ ತನಿಖೆಯ ವೇಳೆ ತಿಳಿದುಬಂದಿದೆ.
ಮ್ಯಾಟ್ರಿಮನಿ ಸೈಟ್‌ನಲ್ಲಿ ತಾನೊಬ್ಬ ಸರ್ಕಾರಿ ನೌಕರ ಎಂದು ಪರಿಚಯ ಮಾಡಿಕೊಂಡು ಮದುವೆ ವಯಸ್ಸು ಮೀರಿದ ಹಾಗೂ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ತಾನು ದಾವಣಗೆರೆಯಲ್ಲಿ ಮನಾಪ ಉದ್ಯೋಗಿ ಎಂದು ಪರಿಚಯ ಹೇಳಿ ಎರಡು ತಿಂಗಳ ಹಿಂದೆ ಭದ್ರಾವತಿಯ ಮಹಿಳೆಯನ್ನು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ತನ್ನ ತಾಯಿಗೆ ಚಿಕಿತ್ಸೆಗಾಗಿ 8 ಲಕ್ಷ ರೂ. ಅವಶ್ಯಕತೆಯಿದೆ ಎಂದು ಆಕೆಯಿಂದ 7.43 ಲಕ್ಷ ರೂ. ಹಣ ಪಡೆದಿದ್ದ. ಬಳಿಕ ಆಕೆಯಿಂದ 2.25 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣವನ್ನೂ ಪಡೆದು ಪರಾರಿಯಾಗಿದ್ದ.
ಐಟಿಐ ಓದಿರುವ ಭೀಮರಾವ್ ದುಬಾರಿ ಬೆಲೆಯ ಬಟ್ಟೆ ಧರಿಸಿ ಓಡಾಡುತ್ತಿದ್ದ. ಶೂ ಧರಿಸಿ ಕೋಟ್ ಹಾಕಿಕೊಂಡು ಅಧಿಕಾರಿ ರೀತಿ ವರ್ತನೆ ಮಾಡುತ್ತಿದ್ದ. ತನ್ನ ಬಣ್ಣನೆ ಮಾತಿನಲ್ಲೇ ಮಹಿಳೆಯರನ್ನು ಮರುಳು ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಸಂಬಂಧಿಯೊಬ್ಬರ ಮದುವೆ ಇದೆ. ಚಿನ್ನದ ಒಡವೆ ಧರಿಸದಿದ್ದರೆ ಸರ್ಕಾರಿ ಅಧಿಕಾರಿಯಾಗಿ ನನ್ನ ಸ್ಟೇಟಸ್‌ಗೆ ಕುಂದು ಬರುತ್ತದೆ ಎಂದು ಹೇಳಿ ಮಹಿಳೆಯಿಂದ ಚಿನ್ನಾಭರಣ ಪಡೆದು ಮರಳಿ ಕೊಡದೆ ವಂಚಿಸಿದ್ದ ಎಂದು ಭದ್ರಾವತಿಯ ಮಹಿಳೆ ನೀಡಿದ ದೂರಿನ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಜೈಭೀಮ್ ಪಡಕೋಟಿ ವಿರುದ್ಧ ಮಹಿಳಾ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ಬಂಧಿಸಿ ಮೊಬೈಲ್ ಫೋನ್ ಪರಿಶೀಲಿಸಿದಾಗ ಭದ್ರಾವತಿಯ ಮಹಿಳೆ ಜೊತೆಗೂ ಸಂಪರ್ಕದಲ್ಲಿರುವುದು ತಿಳಿದುಬಂದಿತ್ತು.