ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಾರ್ಕಳ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ( VIDEO)
ವರದಿ: ಅರುಣ್ ಭಟ್, ಕೈಲಾಜೆ, ಕಾರ್ಕಳ
ಕಾರ್ಕಳ: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಶೂನ್ಯ ಅಭಿವೃದ್ಧಿಯೇ ಸಾಧನೆಯಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದು 60 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೆ ನಯಾಪೈಸೆ ಅನುದಾನ ನೀಡದ ಕಾಂಗ್ರೆಸ್ ಕರಾವಳಿಯ ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ.ಈ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಆಂದೋಲನ ನಡೆಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಫೆ 6ರಂದು ಗುರುವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಕಾರ್ಕಳ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕಳೆದ 2004ರಿಂದ ಶಾಸಕನಾಗಿ ಆಯ್ಕೆಯಾಗಿ ವಿಧಾನಸಭೆಗೆ ಹೋಗುತ್ತಿದ್ದು, ಈವರೆಗೂ ಇಂತಹ ದರಿದ್ರ ಸರ್ಕಾರ ಕಂಡಿರಲಿಲ್ಲ. ಎರಡು ವರ್ಷದಲ್ಲಿ ಮಂಗಳೂರು, ಉಡುಪಿ ಉತ್ತರ ಕನ್ನಡ ಈ ಮೂರು ಜಿಲ್ಲೆಗಳಿಗೆ ನಯಾಪೈಸೆ ಅನುದಾನ ಕೊಡದೇ ನಿರ್ಲಕ್ಷ್ಯ ಮಾಡಿದ್ದು, 2023 24 ರಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ನೇತೃತ್ವದ ಸಭೆಯಲ್ಲಿ ಕೈಗೊಂಡ ಯೋಜನೆಗಳಿಗೆ ಅನುದಾನವೇ ಕೊಟ್ಟಿಲ್ಲ. ಏಕವಿನ್ಯಾಸ ಹಾಗೂ ನೈನ್ ಲೆವೆನ್ ಪಡೆಯಲು ದೂರದ ಕಾಪು ಪ್ರಾಧಿಕಾರಕ್ಕೆ ಹೋಗಬೇಕು.ಈಗಾಗಲೇ 600 ಅರ್ಜಿ ಬಾಕಿಯಿದ್ದು ಮನೆಕಟ್ಟುವವರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಜನ ಸಾಮಾನ್ಯರು ಕಟ್ಟಿದ ತೆರಿಗೆ ಹಣ ಸಂಗ್ರಹಿಸಿದ ಹಣದಿಂದ ಅಭಿವೃದ್ಧಿಗೆ ಯಾಕೆ ಅನುದಾನ ನೀಡುತ್ತಿಲ್ಲ? ಗ್ರಾಮ ಪಂಚಾಯತಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ವರ್ಷಕ್ಕೆ ಪ್ರತೀ ಗ್ರಾಮಕ್ಕೆ 12 ಕೋಟಿ ಅನುದಾನ ನೀಡಿದ್ದೇವೆ. ಆದರೆ ಎರಡು ವರ್ಷದಲ್ಲಿ ಇಡೀ ಕಾರ್ಕಳ ಕ್ಷೇತ್ರಕ್ಕೆ ಕೇವಲ 13 ಕೋಟಿ ಅನುದಾನ ನೀಡಿ ಶಾಸಕರಿಗೆ ಕಪಾಳಮೋಕ್ಷ ಮಾಡಬೇಕು ಎಂದ ಕಾರ್ಕಳ ಬ್ಲಾಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನಾಚಿಕೆಯಾಗಬೇಕು ಎಂದರು.
ಮಣಿರಾಜ ಶೆಟ್ಟಿ ಮಾತನಾಡಿ,ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇರಿಸಿ ಚುನಾಯಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ ಮೇಲಿನ ನಂಬಿಕೆ ಕುಸಿದುಬಿದ್ದಿದೆ
ಸರ್ಕಾರ ಬಂದು 2 ವರ್ಷಗಳಲ್ಲಿ ಇಡೀ ಕ್ಷೇತ್ರಕ್ಕೆ ಕೇವಲ 12 ಕೋಟಿ ಅನುದಾನ ನೀಡಿದೆ. ಬಾಣಂತಿಯರ ಸರಣಿ ಸಾವು, ಆರೋಗ್ಯ ಸೇವೆ ಸಿಗುತ್ತಿಲ್ಲ,ರೈತರ ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಹೈನುಗಾರಿಕೆ ಸಬ್ಸಿಡಿ ನೀಡುತ್ತಿಲ್ಲ ಇದರಿಂದ ಬಡ ಹೈನುಗಾರರು ಸಂಕಷ್ಟದಲ್ಲಿದ್ದಾರೆ ಎಂದರು.
ಸತೀಶ್ ಶೆಟ್ಟಿ ಮುಟ್ಲುಪಾಡಿ ಮಾತನಾಡಿ,ಸರ್ಕಾರದ ಬಳಿ ಗೃಹ ಲಕ್ಷ್ಮೀ ಯೋಜನೆಗೆ ನೀಡಲು ಹಣವಿಲ್ಲ ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷನಿಗೆ 25 ಸಾವಿರ ವೇತನ ನೀಡುತ್ತಿದೆ ಈ ಮೂಲಕ ಮಹಿಳೆಯರ ಗೃಹಲಕ್ಷ್ಮೀ ಯೋಜನೆ ಹಣವನ್ನು ಕಬಳಿಸಲಾಗುತ್ತಿದೆ. ನಿಮ್ಮ ಭಂಡತನದಿಂದ ನಿಮ್ಮ ಪಕ್ಷಕ್ಕೆ 30% ಕ್ಕೆ ಮತಪ್ರಮಾಣ ಕುಸಿದಿದೆ. ಮುಡಾ ಹಗರಣದ ಮೂಲಕ ಸಾವಿರಾರು ಕೋಟಿ ಹಣ ನುಂಗಿದ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಮೊನ್ನೆ ಬಂದವರು ಏನೂ ಸಾಧನೆ ಮಾಡದೇ ಬೊಗಳುವವರಿಂದ ನಾವು ಪಾಠ ಕಲಿಯಬೇಕಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಸಾವಿರಾರು ರೈತರ ಆತ್ಮಹತ್ಯೆ, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬಡವರ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದು,
ತಾಕತ್ತಿದ್ರೆ ಎರಡು ವರ್ಷಗಳಲ್ಲಿ ನೀವು ಮಾಡಿದ ಅಭಿವೃದ್ಧಿ ಸಾಧನೆಗಳ ಪಟ್ಟಿ ಬಿಡುಗಡೆ ಮಾಡಿ ಎಂದು ಸವಾಲೆಸೆದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ 10 ಲಕ್ಷ 50 ಸಾವಿರ ಮಹಿಳೆಯರಿಗೆ ಇನ್ನೂ ಒಂದು ಕಂತೂ ಗೃಹಲಕ್ಷ್ಮೀ ಹಣ ಬಂದಿಲ್ಲ. ಪೊಲೀಸ್ ಶಕ್ತಿಯನ್ನು ಜನರ ಹಿತಕ್ಕೆ ಬಳಸಿಕೊಳ್ಳಬೇಕು,ಆದರೆ ಬಿಜೆಪಿ ಕಾರ್ಯಕರ್ತರ ದಮನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಆಯುಷ್ಮಾನ್ ಕಾರ್ಡ್ ನೀಡುತ್ತಿದೆ.ಆದರೆ ಬಿಪಿಎಲ್ ಕಾರ್ಡ್ ರದ್ದತಿಯಿಂದ ಬಡವರು ಉಚಿತ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 72 ಸಾವಿರ ಕೋಟಿ ಅನುದಾನ ನೀಡಿದೆ.ಆದರೆ ಈ ಯೋಜನೆ ಹಳ್ಳ ಹಿಡಿದಿದೆ, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ 24 ಸಾವಿರ ಕೋಟಿ ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಮಟ್ಟಾರು ರತ್ನಾಕರ್ ಹೆಗ್ಡೆ,ಮಹಾವೀರ ಹೆಗ್ಡೆ, ಜಯರಾಮ ಸಾಲ್ಯಾನ್, ರೇಶ್ಮಾ ಉದಯ ಶೆಟ್ಟಿ, ರಶ್ಮಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.