ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ವೈದ್ಯರು ಘೋಷಿಸಿದ್ದ ವ್ಯಕ್ತಿ ಆ್ಯಂಬುಲೆನ್ಸ್‌ನಲ್ಲಿ ಬದುಕಿ ಬಂದ
Monday, February 10, 2025
ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುವ ವ್ಯಕ್ತಿಯೋರ್ವರು ಊರಿಗೆ ಕರೆತರುತ್ತಿದ್ದಾಗಲೇ ಬದುಕಿ ಬಂದಿರುವ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.
ಬಂಕಾಪುರದ ಮಂಜುನಾಥ ನಗರದ ನಿವಾಸಿ ಬಿಷ್ಟಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ (45) ಸತ್ತು ಬದುಕಿರುವ ವ್ಯಕ್ತಿ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಅವರು ಉಸಿರಾಡುತ್ತಿಲ್ಲ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಆದ್ದರಿಂದ ಅವರ ಪತ್ನಿ ಮತ್ತು ಸಂಬಂಧಿಕರು ಗೋಳಾಡುತ್ತ ಆಂಬ್ಯುಲೆನ್ಸ್‌ನಲ್ಲಿ ತಮ್ಮ ಊರು ಬಂಕಾಪುರಕ್ಕೆ ಕರೆದೊಯ್ಯುತ್ತಿದ್ದರು.
ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ ಶೀಲಾ, "ಅಗೋ ನೊಡು, ಡಾಬಾ ಬಂತು ನೋಡು ಊಟ ಮಾಡುತ್ತೀಯಾ?'' ಎಂದು ಜೋರಾಗಿ ಕರೆದು ಗೋಳಾಡಿದ್ದಾರೆ. ಈ ವೇಳೆ ಮೃತಪಟ್ಟ ವ್ಯಕ್ತಿ ಉಸಿರಾಡಿದ್ದಾನೆ. ಗಾಬರಿಗೊಂಡ ಸಂಬಂಧಿಕರು ರೋಗಿಯನ್ನು ನೇರವಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರುವುದು ದೃಢಪಟ್ಟಿದೆ. ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ.
ಅದೇ ಆ್ಯಂಬುಲೆನ್ಸ್ ವಾಹನದಲ್ಲಿ ರೋಗಿಯನ್ನು ಮರಳಿ ಕರೆತಂದು ಹುಬ್ಬಳ್ಳಿ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಸದ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಷ್ಣಪ್ಪರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಶೋಕ ಗುಡಿಮನಿ ಮಾಸ್ತರ್ ಸತ್ತಿದ್ದಾರೆಂದು ತಿಳಿದ ಬಂಕಾಪುರದ ಜನರು ಅಷ್ಟರಲ್ಲೇ ಬ್ಯಾನರ್ ಗಳನ್ನು ಹಾಕಿದ್ದರು. ಅಲ್ಲದೆ, ಮೃತನ ಅಂತ್ಯಕ್ರಿಯೆಗೂ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.