ಶೀಘ್ರದಲ್ಲಿಯೇ ಎಂ.ಎಸ್.ಧೋನಿ ರಾಜಕೀಯ ಪ್ರವೇಶಿಸಲಿದ್ದಾರಂತೆ..! ಯಾವ ಪಕ್ಷದಿಂದ?
Sunday, February 2, 2025
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅವರಿಗೆ ಇರುವ ಕ್ರೇಜ್‌ಗಳ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವ ಅಗತ್ಯವಿಲ್ಲ. ಏಕೆಂದರೆ, ಧೋನಿ ಏನು ಎಂಬುದು ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಗೊತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದರೂ, ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದೆ. ಈ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಟೀಂ ಇಂಡಿಯಾದ ಏಕೈಕ ನಾಯಕ ಧೋನಿ. ತನ್ನ ನಾಯಕತ್ವದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರಿ ಸದ್ದು ಮಾಡಿದ ಧೋನಿ, ಇದೀಗ ಅದೇ ನಾಯಕತ್ವದ ಖದರ್ ತೋರಲು ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಸಿಸಿಐ ಉಪಾಧ್ಯಕ್ಷ ಆಗಿರುವ ರಾಜೀವ್ ಶುಕ್ಲಾ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಧೋನಿ ಓರ್ವ ಉತ್ತಮ ರಾಜಕಾರಣಿಯಾಗಬಲ್ಲರು ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಧೋನಿ ಅವರ ರಾಜಕೀಯ ಪ್ರವೇಶದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ ರಾಜಕಾರಣಿ ಆಗುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಸೌರವ್ ಗಂಗೂಲಿ ಬಂಗಾಳ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂದು ನಾನು ಯಾವಾಗಲೋ ಭಾವಿಸಿದ್ದೆ. ಧೋನಿ ಏನಾದರೂ ರಾಜಕೀಯಕ್ಕೆ ಪ್ರವೇಶ ಮಾಡಿದರೆ, ಅಲ್ಲಿಯೂ ಒಳ್ಳೆಯ ಕೆಲಸಗಳನ್ನು ಮಾಡಲಿದ್ದಾರೆ. ಚುನಾವಣೆಗೆ ನಿಂತರೆ ಧೋನಿ ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಏಕೆಂದರೆ, ಅವರಿಗೆ ಅಷ್ಟೊಂದು ಜನಪ್ರಿಯತೆ ಇದೆ. ಆದರೆ, ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೋ ಇಲ್ಲವೋ ನನಗೆ ತಿಳಿದಿಲ್ಲ, ಅದು ಅವರ ಕೈಯಲ್ಲಿದೆ ಎಂದು ಶುಕ್ಲಾ ಹೇಳಿಕೆ ನೀಡಿದ್ದಾರೆ.
ಹಿಂದೊಮ್ಮೆ ಧೋನಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಈ ವೇಳೆ ಧೋನಿಯೊಂದಿಗೆ ನಡೆಸಿದ ಆಸಕ್ತಿದಾಯಕ ಸಂಭಾಷಣೆಯ ಬಗ್ಗೆಯೂ ಶುಕ್ಲಾ ಇದೇ ಸಂದರ್ಭದಲ್ಲಿ ಮಾತನಾಡಿದರು. ನೀವು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಂತೆ ಎಂದು ಧೋನಿ ಅವರನ್ನು ಕೇಳಿದಾಗ, ಅವರು ಇಲ್ಲ, ಇಲ್ಲ ಎಂದರು. ಧೋನಿ ಅವರದ್ದು ರಾಜಕೀಯದಿಂದ ದೂರವಿರುವ ಸ್ವಭಾವ ಎಂದರು. ಅಲ್ಲದೆ, ಧೋನಿ ಅವರು ಮೊಬೈಲ್ ಫೋನ್ ಕೂಡ ಇಟ್ಟುಕೊಳ್ಳುವುದಿಲ್ಲ. ಅವರ ಬಳಿ ಮೊಬೈಲ್ ಇಲ್ಲದ ಕಾರಣ ಬಿಸಿಸಿಐ ಆಯ್ಕೆದಾರರು ಕೂಡ ಅವರನ್ನು ಸಂಪರ್ಕಿಸುವುದು ಕಷ್ಟಕರವಾಗಿತ್ತು. ಹೀಗಿರುವಾಗ ರಾಜಕಾರಣಿಗಳ ಕೈಗೆ ಧೋನಿ ಸಿಗುವುದಿಲ್ಲ ಎಂದು ಶುಕ್ಲಾ ಹೇಳಿದರು.