ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ- ಕುಂಭಮೇಳದಲ್ಲಿ ಭಾಗಿಯಾದ ಡಿಕೆಶಿ
Wednesday, February 26, 2025
ಬೆಂಗಳೂರು: ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ. ನಾನು ನನ್ನ ಜೀವನದಲ್ಲಿ ಎಲ್ಲಾ ಧರ್ಮದ ಬಗ್ಗೆ ಗೌರವವಿರಿಸಿದ್ದೇನೆ. ಕುಂಭ ಮೇಳದಲ್ಲಿ ಭಾಗವಹಿಸಿ ನಾನು ಉತ್ತಮ ಅನುಭವ ಹೊಂದಿದ್ದೇನೆ. ತುಂಬಾ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕುಂಭಮೇಳದಲ್ಲಿ ಭಾಗಿಯಾಗಿರುವ ಬಗ್ಗೆ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ನಾನು ಎಲ್ಲಾ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ. ಜೈಲಿನಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಇಸ್ಲಾಂ ಧರ್ಮದವರ ದರ್ಗಾಗೂ ಚರ್ಚ್‌ಗೂ ನಾನು ಹೋಗುತ್ತೇನೆ. ಕುಂಭಮೇಳದಲ್ಲಿ ನನಗೆ ಉತ್ತಮ ಅನುಭವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾನು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಆದರೆ, ಇದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಶಾ ಫೌಂಡೇಶನ್ ಸಂಸ್ಥೆಯವರು ನಮ್ಮ ಮನೆಗೆ ಬಂದು ಆಹ್ವಾನ ನೀಡಿದ್ದಾರೆ. ನಾನು ಬರುವ ತನಕ ಕಾದು ಆಹ್ವಾನಿಸಿದ್ದಾರೆ. ಕಳೆದ ಬಾರಿ ನನ್ನ ಮಗಳು ಹೋಗಿದ್ದಳಂತೆ. ಈ ಬಾರಿ ನಾನು ಹೋಗುತ್ತಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಬೇರೆ ತರಹ ಬಿಂಬಿಸುತ್ತಿದ್ದಾರೆ.
ನಾನು ಬಿಜೆಪಿಯವರ ಜೊತೆ ಯಾವುದೇ ಸಂಪರ್ಕದಲ್ಲಿ ಇಲ್ಲ. ಜಗ್ಗಿ ವಾಸುದೇವ್ ನಮ್ಮ ಮೈಸೂರಿನವರು. ನನ್ನ ಮನೆಗೆ ಬಂದು ಆಹ್ವಾನಿಸಿದ್ದಾರೆ. ನಾನು ಇವತ್ತು ಇಶಾ ಪೌಂಡೇಶನ್ ಕಾರ್ಯಕ್ರಮಕ್ಕೆ ಹೋಗುತ್ತೇನೆ. ನಾನು ಇನ್ನೂ ಅಮಿತ್ ಶಾರನ್ನ ಭೇಟಿಯನ್ನೇ ಮಾಡಿಲ್ಲ. ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗೆ ಹತ್ತಿರ ಅಂತ ವೈರಲ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸ್ಟೀಲ್ ಬ್ರಿಡ್ಜ್ ಹಾಗೂ ಸುರಂಗ ಮಾರ್ಗಕ್ಕೆ ಬಿಜೆಪಿ ವಿರೋಧಕ್ಕೆ ಪ್ರತಿಕ್ರಿಯಿಸಿ, ಕೆಜೆ ಜಾರ್ಜ್ ಸ್ಪೀಲ್ ಬ್ರಿಡ್ಜ್ ಮಾಡಲು ಹೊರಟಾಗ ವಿರೋಧ ಮಾಡಿದ್ರು. ವಿರೋಧ ಪಕ್ಷಗಳು ಟೀಕೆ ಮಾಡಿದಷ್ಟು ಒಳ್ಳೆಯದು. ಸದನದಲ್ಲಿ ಚರ್ಚೆ ಮಾಡುವ ಉದ್ದೇಶದಿಂದ ಸುಮ್ಮನಿದ್ದೇನೆ. ಟನಲ್‌ಗೆ ಪರ್ಯಾಯವಾಗಿ ರಸ್ತೆ ಮಾಡಲು ಪರಿಹಾರವಾಗಿ ಮೂರು ಲಕ್ಷ ಕೋಟಿ ಬೇಕು. ಈ ಹಿಂದೆ ಡಬಲ್ ಡೆಕ್ಕರ್ ರಸ್ತೆ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಆಗ್ತಿರಲಿಲ್ಲ. ಬೈಯುವವರೆಲ್ಲಾ ಬೈತಾ ಇರಲಿ, ಒಳ್ಳೆಯ ಸಲಹೆ ಕೊಟ್ಟರೆ ಸ್ವೀಕಾರ ಮಾಡ್ತವೆ. ಮುಂಬೈ, ದೆಹಲಿ ರಸ್ತೆ ಬೆಂಗಳೂರಿಗಿಂತ ಕಳಪೆ ಇದೆ. ಯಾರೂ ಮುಂಬೈ, ದೆಹಲಿ ಟ್ರಾಫಿಕ್ ಗಮನಿಸುತ್ತಿಲ್ಲ, ಎಲ್ಲರೂ ಬೆಂಗಳೂರು ಬಗ್ಗೆ ಮಾತನಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.