ಮೂರು ತಿಂಗಳಿಂದ ಜಮೆಯಾಗಿಲ್ಲ ಗೃಹಲಕ್ಷ್ಮಿ ಹಣ: ಗ್ಯಾರಂಟಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ದುಡ್ಡು ಬಂದೇ ಬರುತ್ತದೆ- ಸಿಎಂ ಗ್ಯಾರಂಟಿ
Wednesday, February 19, 2025
ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಹಣ ಫಲಾನುಭವಿಗಳ ಕೈ ಸೇರಿಲ್ಲ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಖಂಡಿತಾ ಹಣಬಿಡುಗಡೆ ಆಗಿಯೇ ಆಗುತ್ತದೆ. ಯಾವ ಗ್ಯಾರಂಟಿಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಹಣ ಬಿಡುಗಡೆ ಆಗದಿರುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವ ಯೋಜನೆಗಳನ್ನೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪರಿಶೀಲಿಸಿ ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಒಂದೆರಡು ತಿಂಗಳು ತಡೆ ಆಗಿರಬಹುದು, ಆದರೆ ಹಣ ಕೊಟ್ಟೇ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸರಕಾರದ ಬಳಿ ದುಡ್ಡಿಲ್ಲ ಎಂದೇನೂ ಇಲ್ಲ. ಮೊದಲು ವಾಣಿಜ್ಯ ತೆರಿಗೆ ನಮಗೆ ಬರುತ್ತಿತ್ತು. 4.50 ಲಕ್ಷ ಕೋಟಿ ರೂ. ನಲ್ಲಿ 4ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರವೇ ಕೊಂಡು ಹೋಗುತ್ತದೆ. ನಾವೇನು ಮಾಡೋಣ ಎಂದಿದ್ದಾರೆ.
ತಾಂತ್ರಿಕ ಕಾರಣವೆಂದ ಸರಕಾರ:
ಗೃಹಲಕ್ಷ್ಮಿ ಹಣ ಪಾವತಿ ಆಗದಿರುವ ಕುರಿತು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್ ಪ್ರತಿಕ್ರಿಯೆ ನೀಡಿ, ಯಾವ ಜಿಲ್ಲೆಗೂ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಈ ರೀತಿ ಆಗಿದೆ. ಸದ್ಯದಲ್ಲೇ ಮಹಿಳೆಯರ ಖಾತೆಗೆ ಹಣ ಜಮೆ ಆಗಲಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳ ಬಾಕಿ ಸಂದಾಯವಾಗಬೇಕಿದ್ದು ಸುಮಾರು 1.26 ಕೋಟಿ ಗೃಹಣಿಯರಿಗೆ 7560 ಕೋಟಿ ರೂ.ಗಳನ್ನು ಸರಕಾರ ಪಾವತಿಸಬೇಕಿದೆ.