ಮದ್ಯದ ನಶೆಯಲ್ಲಿ ವಧುವಿನ ಬದಲು ಮತ್ತೊಬ್ಬರಿಗೆ ಹಾರ ಹಾಕಿದ ವರ: ಮುಂದೇನಾಯ್ತು ಗೊತ್ತಾ?
Tuesday, February 25, 2025
ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ನಡೆಯುವ ವಿವಾದಾತ್ಮಕ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತದೆ. ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿರುತ್ತದೆ. ಇದೀಗ ಬೆಳಕಿಗೆ ಬಂದಿರುವ ವಿಚಿತ್ರ ಘಟನೆಯೊಂದರಲ್ಲಿ ವರ ಮದುವೆಯ ದಿನವೇ ಮದ್ಯಸೇವಿಸಿರುವ ವಿಚಾರ ಗಮನಕ್ಕೆ ಬಂದು ವಧುವೊಬ್ಬಳು ಮದುವೆಯನ್ನು ಕ್ಯಾನ್ಸಲ್ ಮಾಡಿ ದಿಬ್ಬಣವನ್ನು ವಾಪಸ್ ಕಳುಹಿಸಿದ್ದಾಳೆ.
ಈ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಪೊಲೀಸರು ವರ ಮತ್ತು ಆತನ ತಂದೆಯೊಂದಿಗೆ ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧುವಿನ ತಂದೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರ ಹಾಗೂ ಆತನ ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಬರೇಲಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕ್ಯೊಲ್ಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಿಲಿಭಿತ್‌ನ ಬರ್ಖೇಡಾದ ವರನೊಂದಿಗೆ ಬರೇಲಿಯ ನಿವಾಸಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿಬ್ಬಣ ಬರೇಲಿ ತಲುಪಿದ ಬಳಿಕ ವಧು-ವರ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವಾಗ ವಧುವು ವರನ ಕುತ್ತಿಗೆಗೆ ಹಾರವನ್ನು ಹಾಕಿದಳು. ಆದರೆ, ಮದ್ಯದ ಮತ್ತಿನಲ್ಲಿದ್ದ ವರನು ವಧುವಿನ ಬದಲಾಗಿ ತನ್ನ ಸ್ನೇಹಿತನ ಕತ್ತಿಗೆ ಹಾರ ಹಾಕಿದ್ದು, ವಧು ತೀವ್ರ ಮುಜುಗರಕ್ಕೀಡಾಗಿದ್ದಾಳೆ.
ವರನ ನಡೆಯಿಂದ ತೀವ್ರ ಮುಜುಗರಕ್ಕೀಡಾಗಿ ಕೋಪಗೊಂಡ ವಧು ಮದುವೆಯನ್ನು ನಿರಾಕರಿಸಿ ಮೆರವಣಿಗೆಯನ್ನು ಹಿಂದಕ್ಕೆ ಕಳುಹಿಸಿದಳು. ಬಳಿಕ ವಧುವಿನ ಮನವೊಲಿಸಲು ಉಭಯ ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರು ವರನನ್ನು ಮದುವೆಯಾಗಲು ನಿರಾಕರಿಸಿದಳು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಧುವಿನ ತಂದೆ ನೀಡಿದ ದೂರಿನ ಮೇರೆಗೆ ವರ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾರ್ವಜನಿಕ ಅವಮಾನದ ಪ್ರಕರಣ ದಾಖಲಿಸಲಾಗಿದೆ.
ವರ, ಆತನ ತಂದೆ ಮತ್ತು ಇತರ ಮೂವರು ಕುಟುಂಬ ಸದಸ್ಯರು ಸೇರಿದಂತೆ ಒಟ್ಟು ಐವರಿಗೆ ದಂಡ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ವಿಚಾರದ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಬರೇಲಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.