ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಾಳೆಂದು ತಂದೆಯೇ ಕೆರೆಗೆ ತಳ್ಳಿ ಪುತ್ರಿಯ ಹತ್ಯೆಗೈದ ಆರೋಪ
Wednesday, February 12, 2025
ಬೆಂಗಳೂರು: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ತಂದೆಯೇ ಪುತ್ರಿಯನ್ನು ಕೆರೆಗೆ ಬೀಳಿಸಿ ಕೊಂದಿದ್ದಾನೆಂಬ ಆರೋಪ ಕೇಳಿ ಬಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ಹಾರೋಹಳ್ಳಿಯಲ್ಲಿ ನಡೆದಿದೆ.
ಬೈಕ್ ಸಮೇತ ಕೆರೆಗೆ ಬಿದ್ದ ತಂದೆ ರಾಮಮೂರ್ತಿ ನೀರಿನಲ್ಲಿ ಈಜಿ ದಡ ಸೇರಿದ್ದರೆ, ಪುತ್ರಿ ಸಹನಾ (20) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಸಾವಿನ ಸುತ್ತ ಅನುಮಾನ ಕೇಳಿಬಂದಿದ್ದು, ತಂದೆಯೇ ಪುತ್ರಿಯನ್ನು ಕೊಂದಿದ್ದಾನೆಂದು ಗಂಭೀರ ಆರೋಪ ಕೇಳಿ ಬಂದಿದೆ.
ಸಹನಾ ಬೇರೆ ಜಾತಿಗೆ ಸೇರಿದ ನಿಖಿಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಕೆಲವು ದಿನಗಳ ಹಿಂದೆ ಈ ವಿಚಾರ ಮನೆಯವರಿಗೆ ತಿಳಿದು ಬಂದಿದೆ. ಇದರಿಂದ ಸಿಟ್ಟಿಗೆದ್ದ ತಂದೆ ರಾಮಮೂರ್ತಿ ಮನೆಯಲ್ಲಿ ಗಲಾಟೆ ಮಾಡಿದ್ದಲ್ಲದೆ, ತನ್ನ ಸಹೋದರಿಯ ಪುತ್ರನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾನೆ. ಈ ಬಗ್ಗೆ ಸ್ನೇಹಿತನೊಬ್ಬನ ಮನೆಗೆ ಕರೆದೊಯ್ದು ಮಾತುಕತೆಯನ್ನೂ ನಡೆಸಿದ್ದ. ಅಲ್ಲಿಯೂ ಪುತ್ರಿ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಎನ್ನಲಾಗಿದೆ.
ಅಲ್ಲಿಂದ ಪುತ್ರಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬರುತ್ತಿದ್ದಾಗಲೇ ಕೆರೆಯ ಏರಿ ಮೇಲಿನಿಂದ ಚಲಿಸುತ್ತಿದ್ದಾಗ ಬೈಕ್ ಸಹಿತ ಕೆರೆಗೆ ಬಿದ್ದಿದ್ದಾರೆ. ಪುತ್ರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ತಂದೆ ರಾಮಮೂರ್ತಿ ಈಜಿ ದಡ ಸೇರಿದ್ದ. ಘಟನೆಯ ಬಳಿಕ ಹೆಬ್ಬಗೋಡಿ ಠಾಣೆಗೆ ತೆರಳಿ ಘಟನೆ ಬಗ್ಗೆ ಹೇಳಿಕೊಂಡಿದ್ದ. ಆದರೆ ಆತನ ವರ್ತನೆ ಕಂಡು ಪೊಲೀಸರು ಅನುಮಾನದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ, ಯುವತಿಯನ್ನು ಪ್ರೀತಿಸುತ್ತಿದ್ದ ನಿಖಿಲ್ ಮರ್ಯಾದೆ ಹತ್ಯೆ ಬಗ್ಗೆ ಆರೋಪಿಸಿ ರಾಮಮೂರ್ತಿ ವಿರುದ್ಧ ಹೆಬ್ಬಗೋಡಿ ಠಾಣೆಗೆ ದೂರು ನೀಡಿದ್ದಾನೆ. ತಂದೆಯೇ ತನ್ನ ಪುತ್ರಿಯನ್ನು ಹತ್ಯೆ ಮಾಡಿದ್ದಾನೆ, ಕೆರೆಯ ನೀರಿನಲ್ಲಿ ಕಾಲಿನಿಂದ ಒತ್ತಿ ತಲೆ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದೆವು. ಎರಡು ದಿನಗಳ ಹಿಂದಷ್ಟೇ ಯುವತಿ ಹೆತ್ತವರಿಗೆ ನಮ್ಮ ಪ್ರೀತಿ ಬಗ್ಗೆ ಗೊತ್ತಾಗಿತ್ತು.
ಅದೇ ದಿನ ತನ್ನನ್ನು ರಾಮಮೂರ್ತಿ ಕರೆ ಮಾಡಿದ್ದು ನಿಂದಿಸಿದ್ದಲ್ಲದೆ ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದರು. ಬೇರೊಂದು ಮನೆಯಲ್ಲಿ ನ್ಯಾಯ ಪಂಚಾಯತಿ ಆಗಿದ್ದು, ಈ ವೇಳೆ ಪುತ್ರಿಯ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದ. ಅಲ್ಲದೆ, ಪ್ರಾಣ ಹೋದರೂ ನಿನ್ನ ಪ್ರೀತಿಗೆ ಒಪ್ಪುವುದಿಲ್ಲ ಎಂದು ಆವಾಜ್ ಹಾಕಿದ್ದ. ಈಗ ಮಾರ್ಗ ಮಧ್ಯೆ ಕೆರೆಗೆ ತಳ್ಳಿ ಆಕೆಯನ್ನು ಹತ್ಯೆ ಮಾಡಿದ್ದಾನೆಂದು ಪೊಲೀಸ್ ದೂರು ನೀಡಿದ್ದಾನೆ.