ಮೊದಲು ಸಾಮೂಹಿಕ ಆತ್ಮಹತ್ಯೆಗೆ ಪ್ಲ್ಯಾನ್ ಆದರೆ ಒಂದು ಅನುಮಾನ ಸರಣಿ ಹತ್ಯೆಗೆ ಕಾರಣವಾಯ್ತಾ?
Friday, February 28, 2025
ಕೇರಳ: ಯುವಕನೊಬ್ಬನಿಂದ ನಡೆದ ಸರಣಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಲ್ಲಿದೆ. ಈತ ತನ್ನ ಪ್ರೇಯಸಿಯೂ ಸೇರಿದಂತೆ ತನ್ನ ಸಂಬಂಧಿಕರಾದ ಐವರನ್ನು ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ. ಈ ಭೀಕರ ಕೊಲೆಗೆ ಕಾರಣ ಏನಿರಬಹುದೆಂದು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಇದೀಗ ಕೊನೆಗೂ ಈ ಸರಣಿ ಹತ್ಯೆಗೆ ಕಾರಣ ಬಹಿರಂಗವಾಗಿದೆ.
ವೆಂಜರಮೂಡು ಹತ್ಯಾಕಾಂಡಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಆರೋಪಿ ಅಫಾನ್ ಕುಟುಂಬವು ಲಕ್ಷಾಂತರ ರೂ. ಸಾಲದಲ್ಲಿತ್ತು. ಇದೇ ಸಾಲ ಸರಣಿ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
23ವರ್ಷದ ಅಫಾನ್‌ನ ತಂದೆಯ ವಿದೇಶದ ಸಾಲದೊಂದಿಗೆ, 65 ಲಕ್ಷ ರೂ. ಸಾಲವನ್ನು ಹೊಂದಿದ್ದರು. ಅವರ ಕುಟುಂಬವು ಅನೇಕ ಮಂದಿಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿತ್ತು. ಆದರೆ, ಪಡೆದ ಸಾಲವನ್ನು ಮರುಪಾವತಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಜೀವನ ನಡೆಸಲೆಂದೇ ಅಫಾನ್ ಕುಟುಂಬ ಹಣ ಸಾಲ ಪಡೆಯುತ್ತಿತ್ತು. ಯಾರಾದರೂ ಸಾಲದ ಹಣ ವಾಪಸ್ ಕೇಳಿದಾಗ, ಮತ್ತೊಬ್ಬರಿಂದ ಸಾಲು ಪಡೆದು ಅವರಿಗೆ ಹಿಂತಿರುಗಿಸುತ್ತಿದ್ದರು. ಸಾಲದ ಮೇಲೆ ಸಾಲ ಮಾಡುತ್ತಿದ್ದರಿಂದ ಸಾಲದ ಮೊತ್ತ ಬೆಟ್ಟದಷ್ಟು ಬೆಳೆದಿತ್ತು. ಇದರಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ, ಅಫಾನ್ ಕುಟುಂಬದ ಬಗ್ಗೆ ಗೊತ್ತಾದಾಗ ಜನರು ಸಾಲ ಕೊಡುವುದನ್ನು ಕೂಡ ನಿಲ್ಲಿಸಿದರು.
ಅಫ್ಘಾನ್ ತಂದೆ ರಹೀಮ್, ಸೌದಿ ಅರೇಬಿಯಾದಲ್ಲಿ ವ್ಯವಹಾರ ನಡೆಸುತ್ತಿದ್ದಾಗಲೇ ಭಾರಿ ಸಾಲದಲ್ಲಿದ್ದರು. ಅವರು ಕಳೆದ ಏಳು ತಿಂಗಳಿನಿಂದ ಕುಟುಂಬಕ್ಕೆ ಹಣ ಕಳುಹಿಸಿರಲಿಲ್ಲ. ಅಲ್ಲದೆ, ತನ್ನ ಮನೆಯನ್ನು ಮಾರಿ ಹಣವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಕುಟುಂಬದಲ್ಲಿ ಜಗಳ ಕೂಡಾ ನಡೆದಿತ್ತು. ಇತ್ತ ಅಫಾನ್ ತಾಯಿ ಶಮಿ ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗೂ ಕೂಡ ಹಣವಿರಲಿಲ್ಲ.
ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಾಗ ಇಡೀ ಕುಟುಂಬ ಆರಂಭದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಯೋಜನೆ ಹಾಕಿತ್ತು. ಒಂದು ವೇಳೆ ಎಲ್ಲರೂ ಸಾಯದಿದ್ದರೆ ಏನು ಮಾಡುವುದು ಎಂಬ ಆ ಕ್ಷಣದ ಆಲೋಚನೆಯೇ ಸಾಮೂಹಿಕ ಹತ್ಯೆಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಕೊಲೆಗೆ ಸಂಚು ರೂಪಿಸಿದ್ದೇ ಅಫಾನ್ ಎಂಬುದು ಬಯಲಾಗಿದೆ.
ಘಟನೆ ನಡೆದ ದಿನ ಅಫಾನ್‌ನಿಂದ ಮೊದಲು ದಾಳಿಗೆ ಒಳಗಾದ ವ್ಯಕ್ತಿ ಅವರ ತಾಯಿ ಉಮ್ಮಾ ಶೆಮಿ. ಬೆಳಗ್ಗೆ 11 ಗಂಟೆ ಸುಮಾರಿಗೆ ಉಮ್ಮಾ ಶೆಮಿಯ ಕುತ್ತಿಗೆಗೆ ಶಾಲುವಿನಿಂದ ಬಿಗಿದು ಕೊಲ್ಲಲು ಅಫಾನ್ ಪ್ರಯತ್ನಿಸಿದನು. ಆಕೆ ಪ್ರಜ್ಞೆ ತಪ್ಪಿದಾಗ, ಅವಳು ಸತ್ತಿದ್ದಾಳೆಂದು ಭಾವಿಸಿ ಕೋಣೆಯಲ್ಲಿ ಬೀಗ ಹಾಕಿ ಹೊರಗೆ ಹೋದನು. ಬಳಿಕ, ಇತರರನ್ನು ಕೊಲ್ಲಲು ಆಯುಧವನ್ನು ಸಿದ್ಧಪಡಿಸಿದ್ದಾನೆ. ಇದಕ್ಕಾಗಿ, ಆತ ವೆಂಜರಮೂಡಿನಲ್ಲಿರುವ ಹಣಕಾಸು ಸಂಸ್ಥೆಗೆ ಹೋಗಿ 1,500 ರೂ. ಸಾಲ ಪಡೆದು ಭಾರವಾದ ಸುತ್ತಿಗೆಯನ್ನು ಖರೀದಿಸಿದನು.
ಬಳಿಕ ಅಫಾನ್ ಚೀಲ ಮತ್ತು ಇಲಿ ಪಾಷಣವನ್ನು ಖರೀದಿಸಿದನು. ಇಷ್ಟೆಲ್ಲ ಮಾಡಿ ಮನೆಗೆ ತಲುಪಿದಾಗ, ಅಫಾನ್‌ನ ತಾಯಿ ತಲೆ ಎತ್ತಿ ತನ್ನನ್ನು ನೋಡುತ್ತಿರುವುದನ್ನು ನೋಡಿದನು. ತಕ್ಷಣ ತನ್ನ ತಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದನು. ಅವಳು ಸತ್ತಿದ್ದಾಳೆಂದು ಭಾವಿಸಿ ಮನೆಯಿಂದ ಹೊರಗೆ ಹೋದನು. ಬಳಿಕ, ಅವನು ಪಾಂಗೋಡ್‌ನಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿ ಅದೇ ಸುತ್ತಿಗೆಯಿಂದ ಅವಳನ್ನು ಕೊಂದನು. ನಂತರ, ತನ್ನ ಅಜ್ಜಿಯ ಚಿನ್ನದ ಹಾರವನ್ನು ತೆಗೆದುಕೊಂಡು ವೆಂಜಾರಮೂಡ್‌ಗೆ ಹೋಗಿ ಮಾರಿದನು. ಬಳಿಕ ಎಸ್.ಎನ್ ಪುರಂನಲ್ಲಿದ್ದ ತನ್ನ ತಂದೆಯ ಸಹೋದರ ಲತೀಫ್ (69), ಆತನ ಪತ್ನಿ ಶಾಹೀದಾ (59) ಅವರನ್ನು ಕೊಂದಿದ್ದಾನೆ. ಇದಾದ ನಂತರ ಪೆರುಮಾಳದಲ್ಲಿ ತನ್ನ ಸಹೋದರ ಅಫ್ಘಾನ್ (13) ಮತ್ತು ತನ್ನ ಗರ್ಲ್‌ಫ್ರೆಂಡ್ ಫರ್ಸಾನಾಳನ್ನು ಅಫಾನ್ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಸುತ್ತಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಹೆಚ್ಚು ಶಬ್ದ ಮಾಡದೇ ಸುಲಭವಾಗಿ ಕೊಲೆ ಮಾಡಬಹುದು ಎಂಬುದನ್ನು ಇಂಟರ್ನೆಟ್‌ನಲ್ಲಿ ನೋಡಿ ಆರೋಪಿ ಅಫಾನ್, ಕೊಲೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಅಫಾನ್ ಫೋನ್ ಮತ್ತು ಟ್ಯಾಬ್‌ನಲ್ಲಿರುವ ಡೇಟಾವನ್ನು ರಿಟೈವ್ ಮಾಡಿದರೆ ಅವನು ಇಂಟರ್ನೆಟ್‌ನಲ್ಲಿ ಇದಕ್ಕಾಗಿ ಹುಡುಕಿದ್ದಾನೆಯೇ ಎಂಬುದು ಸ್ಪಷ್ಟವಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಫಾನ್‌ನಿಂದ ಪಾಸ್‌ವರ್ಡ್ ಸಂಗ್ರಹಿಸಿ ಫೋನ್ ಮತ್ತು ಟ್ಯಾಬ್‌ನಲ್ಲಿರುವ ಮಾಹಿತಿಯನ್ನು ಮರುಪಡೆಯಲು ನಿರ್ಧರಿಸಲಾಗಿದೆ.
ಕೊಲೆ ಮಾಡಿದ ಬಳಿಕ ತಾನು ವಿಷ ಸೇವನೆ ಮಾಡಿರುವುದಾಗಿ ಅಫಾನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ದ. ತಕ್ಷಣ ಆತನನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ದಿನಗಳ ವೀಕ್ಷಣೆಯ ನಂತರ, ಅಫಾನ್ ನನ್ನು ಆಸ್ಪತ್ರೆಯಲ್ಲಿ ಬಂಧಿಸಲಾಗುವುದು ಎಂದು ಎಸ್ಪಿ ಕೆ.ಎಸ್.ಸುದರ್ಶನನ್ ತಿಳಿಸಿದ್ದಾರೆ.