ಮಂಗಳೂರು: ನೇತ್ರಾವತಿ ಸೇತುವೆ ದುರಸ್ತಿ ಕಾರ್ಯ- ಎ.1ರಿಂದ30ರವರೆಗೆ ಸಂಚಾರದಲ್ಲಿ ಬದಲಾವಣೆ ಮಾರ್ಗ ಸೂಚಿ ಹೀಗಿದೆ
Sunday, March 30, 2025
ಮಂಗಳೂರು: ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಹಳೆ ನೇತ್ರಾವತಿ ಸೇತುವೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಎ.1ರಿಂದ 30ರವರೆಗೆ ದುರಸ್ತಿ ಕಾಮಗಾರಿ ನಡೆಯಲಿದೆ. ಆದ್ದರಿಂದ ಒಂದು ಸೇತುವೆಯಲ್ಲಿ (ಮಂಗಳೂರು ನಗರದಿಂದ ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ.
ಆದ್ದರಿಂದ ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸಬೇಕು ಹಾಗೂ ಪೀಕ್ ಅವರ್ಸ್‌ಗಳಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರ avoid ಮಾಡಲು ಕೋರಿದೆ.
*ಸಾರ್ವಜನಿಕರಿಗೆ ಉಪಯೋಗಿಸಬಹುದಾದ ಇತರೆ ಮಾರ್ಗಗಳು*
*ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಸ್ಥಳೀಯ ಲಘು ವಾಹನಗಳು/ದ್ವಿ-ಚಕ್ರ ವಾಹನಗಳು ಕೊಣಾಜೆ- ಹರೇಕಳ(ಬ್ರಿಡ್ಜ್) ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದಾಗಿದೆ.
*ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿ-ಚಕ್ರ / ಲಘು ವಾಹನಗಳು ಅಡ್ಯಾರ್-ಹರೇಕಳ(ಬ್ರಿಡ್ಜ್) ಮುಖಾಂತರ ಸಂಚರಿಸುವುದು.
*ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು – ಉಪ್ಪಿನಂಗಡಿ – ಪುತ್ತೂರು - ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು – ಬೋಳಿಯಾರ್ -ಮೆಲ್ಕಾರ್ ಮೂಲಕ ಸಂಚರಿಸುವುದು
*ಬಿ.ಸಿ ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮುಖಾಂತರ ಸಂಚರಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.