ಮಂಗಳೂರು: ಹಿಂಸಾತ್ಮಕವಾಗಿ ಗೋಸಾಗಾಟ- 19ಗೋವುಗಳು ವಶಕ್ಕೆ, ಕೇಸರಿ ಶಾಲು ಕಟ್ಟಿಕೊಂಡಿದ್ದ ಗೋಸಾಗಾಟಕರು, ಬಜರಂಗದಳದ ವಾಹನಕ್ಕೆ ಫೈರಿಂಗ್?
Friday, March 28, 2025
ಮಂಗಳೂರು: ಹಿಂಸಾತ್ಮಕ ರೀತಿಯಲ್ಲಿ ಪಿಕ್‌ಅಪ್ ವಾಹನದಲ್ಲಿ ಗೋಸಾಗಾಟ ಮಾಡುತ್ತಿದ್ದುದನ್ನು ಸೂರಲ್ಪಾಡಿ ಮಸೀದಿ ಬಳಿ ತಡೆದ ಬಜರಂಗದಳ ಕಾರ್ಯಕರ್ತರು ಪಿಕ್‌ಅಪ್ ವಾಹನ ಹಾಗೂ 19ಗೋವುಗಳನ್ನು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಡಬಿದಿರೆಯಿಂದ ಕೈಕಂಬದತ್ತ ಸಂಚರಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಶುಕ್ರವಾರ ಬೆಳಗ್ಗೆ ಹಂಡೇಲು ಕಡೆಯಿಂದ ಎಡಪದವು ಮಾರ್ಗವಾಗಿ ಅತಿವೇಗವಾಗಿ ಸಾಗುತ್ತಿತ್ತು. ಈ ವಾಹನದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಬಜರಂಗದಳದ ಕಾರ್ಯಕರ್ತರು ಅದರ ಹಿಂದೆ ಬಿದ್ದಿದ್ದಾರೆ. ಅತಿವೇಗವಾಗಿ ಬಂದ ಬಜರಂಗದಳದ ಕಾರ್ಯಕರ್ತರು ಸೂರಲ್ಪಾಡಿ ಮಸೀದಿ ಬಳಿ ಪಿಕ್‌ಅಪ್ ವಾಹನವನ್ನು ಅಡ್ಡ ಹಾಕಿದ್ದಾರೆ.
ಈ ವೇಳೆ ಗೋಸಾಗಾಟದ ವಾಹನಕ್ಕೆ ಎಸ್ಕಾರ್ಟ್ ಆಗಿ ಕೆಂಪು ಬಣ್ಣದ ಬೊಲೇರೊ ವಾಹನ ಹಿಂದಿನಿಂದ ಬರುತ್ತಿತ್ತು. ಈ ವಾಹನದಲ್ಲಿ ಇಬ್ಬರು ತಲೆಗೆ ಕೇಸರಿ ಶಾಲು ಧರಿಸಿದ್ದರು. ಬಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆಯುತ್ತಿದ್ದಂತೆ ಬೊಲೆರೋ ವಾಹನದಲ್ಲಿದ್ದರು ಶೂಟ್ ಮಾಡಿದ್ದು ಅದು ಮಿಸ್ ಫೈರ್ ಆಗಿದೆ ಎಂದು ಬಜರಂಗದಳದ ಕಾರ್ಯಕರ್ತ ಪ್ರದೀಪ್ ಸರಿಪಳ್ಳ ಹೇಳಿದ್ದಾರೆ.
ಪಿಕ್‌ಅಪ್ ನಿಲ್ಲಿಸಿದ ತಕ್ಷಣ ವಾಹನದಲ್ಲಿದ್ದ ಐದಾರು ಮಂದಿ ಎಸ್ಕೇಪ್ ಆಗಿದ್ದಾರೆ. ವಾಹನದಲ್ಲಿ ಕೈಕಾಲುಗಳನ್ನು ತಲೆಕೆಳಗಾಗಿಸಿ ಕಟ್ಟಿ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ವಾಹನದಲ್ಲಿ ಒಟ್ಟು 22ಗೋವುಗಳಿದ್ದು, ಎಲ್ಲವೂ ಆಯಾಸಗೊಂಡಿದ್ದು, 3ಗೋವುಗಳು ಅದಾಗಲೇ ಮೃತಪಟ್ಟಿತ್ತು.
ತಕ್ಷಣ ಬಜ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ 19 ಜಾನುವಾರುಗಳನ್ನು ರಕ್ಷಿಸಿ, ವಾಹನವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.