-->

ಅಯ್ಯೋ ದುರ್ವಿಧಿಯೇ...! ಚಹಾ ಕುಡಿಯಲೆಂದು ರೈಲಿನಿಂದ ಕೆಳಗಿಳಿದ ವ್ಯಕ್ತಿಯ ಜೀವನವನ್ನು 22ವರ್ಷಗಳ ದಾಸ್ಯದ ಸಂಕೋಲೆಯೊಳಗೆ ಬಂಧಿಸಿತು Appa rao

ಅಯ್ಯೋ ದುರ್ವಿಧಿಯೇ...! ಚಹಾ ಕುಡಿಯಲೆಂದು ರೈಲಿನಿಂದ ಕೆಳಗಿಳಿದ ವ್ಯಕ್ತಿಯ ಜೀವನವನ್ನು 22ವರ್ಷಗಳ ದಾಸ್ಯದ ಸಂಕೋಲೆಯೊಳಗೆ ಬಂಧಿಸಿತು Appa rao





ಪ್ರಯಾಣ ಮಾಡುವಾಗ ಚಹಾ ಸೇವಿಸಲೆಂದು ರೈಲಿನಿಂದ ಕೆಳಗಿಳಿದ ವ್ಯಕ್ತಿಯ ಜೀವನವೇ ತಲೆಕೆಳಗೆ ಮಾಡಿದ ದುರಂತ ಕತೆಯಿದು. ಆ ಬಳಿಕ ಆತ ಅನುಭವಿಸಿದ್ದು ಬರೋಬ್ಬರಿ 22 ವರ್ಷಗಳ ನರಕಯಾತನೆ.

ಗುಲಾಮಗಿರಿಯಲ್ಲಿಯೇ ತನ್ನ ಜೀವನ ಕಳೆದು, 22 ವರ್ಷಗಳ ಬಳಿಕ ಇದೀಗ ಸ್ವತಂತ್ರನಾಗಿದ್ದಾನೆ‌ ಈ ವ್ಯಕ್ತಿ. ಆದರೆ, ವಿಪರ್ಯಾಸವೆಂದರೆ ತನ್ನ ಕುಟುಂಬ ಎಲ್ಲಿದೆ ಎಂಬುದನ್ನು ತಿಳಿಯದೆ ಇದೀಗ ಆ ವ್ಯಕ್ತಿ ತೀವ್ರ ದುಃಖಿತನಾಗಿದ್ದಾನೆ. ಈ ಕುರಿತ ಮನಕಲಕುವಂತಹ ಕತೆಯೊಂದು ಇಲ್ಲಿದೆ.

ಆ ವ್ಯಕ್ತಿಯ ಹೆಸರು ಅಪ್ಪಾರಾವ್. ಆತ ಮಾನ್ಯಂ ಜಿಲ್ಲೆಯ ಪಾರ್ವತಿಪುರಂ ನಿವಾಸಿ ಎಂದು ಹೇಳಲಾಗುತ್ತಿದೆ. 22 ವರ್ಷಗಳ ಹಿಂದೆ, ಆತ ಕೆಲಸಕ್ಕಾಗಿ ರೈಲಿನಲ್ಲಿ ಪುದುಚೇರಿಗೆ ಹೊರಟಿದ್ದನು. ಆದರೆ, ಅರ್ಧದಾರಿಯಲ್ಲಿ ರೈಲಿನಿಂದ ಇಳಿದು ರೈಲ್ವೆ ನಿಲ್ದಾಣದಲ್ಲಿ ಚಹಾ ಕುಡಿಯಬೇಕೆಂದು ಅನಿಸಿತು. ಈ ಒಂದು ಕ್ಷಣ ಅವರ ಜೀವನವನ್ನೇ ತಲೆಕೆಳಗಾಗಿ ಮಾಡಿತು.

ಚಹಾ ಕುಡಿದ ಬಳಿಕ, ಅಪ್ಪಾರಾವ್ ರೈಲು ಹತ್ತಲು ಹಿಂತಿರುಗಿದ್ದಾಗ, ಅಲ್ಲಿ ರೈಲು ಇರಲಿಲ್ಲ. ಇದರಿಂದ ಅಪ್ಪಾರಾವ್‌ ಭಯಭೀತರಾದರು ಮತ್ತು ಬಹಳ ಚಿಂತಿತರಾಗಿದ್ದರು. ರೈಲಿನ ಬಗ್ಗೆ ತಮ್ಮ ಸುತ್ತಮುತ್ತಲಿನ ಜನರನ್ನು ಕೇಳಿದಾಗ, ರೈಲು ಹೊರಟುಹೋಗಿದೆ ಎಂದರು. ಇತ್ತ ಅಪ್ಪಾರಾವ್ ದಾರಿ ತಪ್ಪಿದರು. ಬೇರೆ ರೈಲಿನಲ್ಲಿ ಹೋಗೋಣವೆಂದರೆ ಅವರ ಬಳಿ ಒಂದು ಪೈಸೆಯೂ ಇರಲಿಲ್ಲ.

ಅಪ್ಪಾರಾವ್‌ಗೆ ಏನು ಮಾಡಬೇಕೆಂದು ತೋಚಲಿಲ್ಲ. ಇತ್ತ ಹೊಟ್ಟೆ ಹಸಿವಾಗಿತ್ತು ಮತ್ತು ತಿನ್ನಲು ಆಹಾರ ಕೂಡ ಇರಲಿಲ್ಲ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿ ಅಪ್ಪಾರಾವ್ ಬಳಿಗೆ ಬಂದು ಏನಾಯಿತು ಎಂದು ಕೇಳಿದನು. ಆತನ ಮುಂದೆ ಅಪ್ಪಾರಾವ್ ನಡೆದ ಘಟನೆ ಎಲ್ಲ ಹೇಳಿದರು. ಬಳಿಕ ಸಹಾಯ ಮಾಡುವುದಾಗಿ ಅಪ್ಪಾರಾವ್‌ ಮನವೊಲಿಸಿದ ಆ ವ್ಯಕ್ತಿ, ನನ್ನ ಬಳಿ ಕೆಲಸ ಮಾಡಿದರೆ ಹಣ ನೀಡುವುದಾಗಿ ನಂಬಿಸಿದ್ದಾನೆ. ಆತನ ಮಾತುಗಳನ್ನು ನಂಬಿ ಅವನೊಂದಿಗೆ ಹೋದ ಅಪ್ಪಾರಾವ್ ಬರೋಬ್ಬರಿ 22 ವರ್ಷಗಳ ಕಾಲ ಗುಲಾಮಗಿರಿಯಲ್ಲಿ ಮುಳಗಬೇಕಾಯಿತು.

ಆ ವ್ಯಕ್ತಿ ಅಪ್ಪಾರಾವ್ ಅವರನ್ನು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಡಂಬನಕುಲಂ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಪ್ಪಾರಾವ್‌ರನ್ನು ಕುರುಬನನ್ನಾಗಿ ನೇಮಿಸಿಕೊಂಡು, ಸಂಬಳ ಕೊಡುವುದಾಗಿ ಮನವೊಲಿಸಿದ್ದಾನೆ. ಇದಾದ ಬಳಿಕ ಯಾವುದೇ ಕೂಲಿಯನ್ನು ನೀಡದೆ ಅಪ್ಪಾರಾವ್‌‌ನಿಗೆ ಬಲವಂತವಾಗಿ ತಮ್ಮಲ್ಲಿಯೇ ಇರಿಸಿಕೊಂಡಿದ್ದಾನೆ. ತಮ್ಮ ಸ್ಥಳದಿಂದ ಹೊರಹೋಗದಂತೆ ತಡೆದಿದ್ದಾನೆ. ಈ ರೀತಿಯಾಗಿ, ಒಂದಲ್ಲ, ಎರಡಲ್ಲ, ಯಾವುದೇ ಸಂಬಳ ನೀಡದೆ 22 ವರ್ಷಗಳ ಕಾಲ ದುಡಿಸಿಕೊಂಡಿದ್ದಾನೆ.

ವಿಚಾರ ತಿಳಿದು ತಮಿಳುನಾಡು ಕಾರ್ಮಿಕ ಇಲಾಖೆ ಅಧಿಕಾರಿಗಳು ಬಲವಂತದ ಕಾರ್ಮಿಕರನ್ನು ನಿರ್ಮೂಲನೆ ಮಾಡಲು ನಡೆಸಿದ ದಾಳಿಗಳಿಂದ ಅಪ್ಪಾರಾವ್ ಪ್ರಕರಣ ಬೆಳಕಿಗೆ ಬಂದಿತು. ಅಪ್ಪಾರಾವ್‌ರನ್ನು ಬಲವಂತದ ಗುಲಾಮಗಿರಿಯಿಂದ ಮುಕ್ತಗೊಳಿಸಲಾಯಿತು. ಅಪ್ಪಾರಾವ್ ಅವರಿಗೀಗ 60 ವರ್ಷ ವಯಸ್ಸಾಗಿದೆ. ಅಪ್ಪಾರಾವ್ ಅವರೊಂದಿಗೆ ಮಾತನಾಡಿದ ಅಧಿಕಾರಿಗಳು ಅವರಿಂದ ವಿವರಗಳನ್ನು ಪಡೆದರು. ಅಪ್ಪಾರಾವ್ ಅವರು ತಾವು ಪಾರ್ವತಿಪುರಂ ಮಂಡಲ, ಜಮ್ಮವಲಸದವರು ಎಂದು ಅಧಿಕಾರಿಗಳಿಗೆ ತಿಳಿಸಿದರು. ಇದರೊಂದಿಗೆ, ತಮಿಳುನಾಡು ಕಾರ್ಮಿಕ ಇಲಾಖೆ ಅಧಿಕಾರಿಗಳು ಪಾರ್ವತಿಪುರಂ ಮಾನ್ಯಂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಅಪ್ಪಾರಾವ್ ಫೋಟೋ ಕಳುಹಿಸಿ ವಿವರಗಳನ್ನು ತಿಳಿಸಿದರು. ಜಿಲ್ಲಾಧಿಕಾರಿ ತಕ್ಷಣ ಪೊಲೀಸರಿಗೆ ವಿವರಗಳನ್ನು ತಿಳಿಸಿ ಅಪ್ಪಾರಾವ್ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಆದೇಶಿಸಿದರು.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪ್ಪಾರಾವ್ ಅವರ ಕುಟುಂಬದ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವರ ಕುಟುಂಬದ ಬಗ್ಗೆ ವಿವರಗಳು ತಿಳಿದುಬಂದಿಲ್ಲ. ಪರಿಣಾಮವಾಗಿ, ಜಿಲ್ಲೆಯ ಇತರ ಹಳ್ಳಿಗಳಲ್ಲಿ ಅಪ್ಪಾರಾವ್‌ ಅವರ ಕುಟುಂಬ ಎಲ್ಲಿದೆ ಎಂದು ಪೊಲೀಸರು ಹುಡುಕುತ್ತಿದ್ದಾರೆ. ಈ ಕುರಿತು ಹೇಳಿಕೆಯನ್ನು ಸಹ ನೀಡಲಾಗಿದೆ. ಅಪ್ಪಾರಾವ್‌ ಅವರ ಕುಟುಂಬದ ಬಗ್ಗೆ ತಿಳಿದಿರುವವರು ತಮಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಅಪ್ಪಾರಾವ್‌ ಪ್ರಸ್ತುತ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ವೃದ್ದಾಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 20 ವರ್ಷಗಳಿಂದ ಒಬ್ಬಂಟಿಯಾಗಿರುವುದರಿಂದ ಮತ್ತು ಯಾರೊಂದಿಗೂ ಮಾತನಾಡದ ಕಾರಣ ಅಪ್ಪಾರಾವ್ ಅವರ ಮಾತು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ, ಅಪ್ಪಾರಾವ್ ತಮ್ಮ ಹಿಂದಿನದನ್ನು ಮರೆತಿದ್ದಾರೆಯೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳು ನೀವು ಯಾವ ಹಳ್ಳಿಯವರು ಎಂದು ಕೇಳಿದಾಗ, ಅಪ್ಪಾರಾವ್ ಒಮ್ಮೆ ಪಾರ್ವತಿಪುರಂ ಬಳಿಯ ಜಮ್ಮಿಡಿವಲಸದವರೆಂದು ಹೇಳಿದರು. ಅದೇ ಸಮಯದಲ್ಲಿ, ಅವರು ಒಡಿಶಾದ ಕೊರಾಪುಟ್ ಜಿಲ್ಲೆಯ ಅಲಮಂಡ ಮಂಡಲದಲ್ಲಿರುವ ಜಮ್ಮಡಿವಲಸ ಎಂದು ಹೇಳಿದ್ದಾರೆ. ಅಲ್ಲದೆ, ಮತ್ತೆ ಅದೇ ಮಂಡಲದಲ್ಲಿರುವ ಜಂಗಿಡಿವಲಸ ಎಂದು ಹೇಳುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಗೊಂದಲಕ್ಕೊಳಗಾದರು. ಆದಾಗ್ಯೂ, ಅಧಿಕಾರಿಗಳು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿಲ್ಲ, ಅಪ್ಪಾರಾವ್ ಅವರ ಕುಟುಂಬ ಸದಸ್ಯರ ವಿವರಗಳನ್ನು ಕಂಡುಹಿಡಿಯಲು ತಮಿಳುನಾಡು ಮತ್ತು ಆಂಧ್ರ ಪ್ರದೇಶ ಅಧಿಕಾರಿಗಳು ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article