ಬಂಟ್ವಾಳ: ಅಪ್ರಾಪ್ತ ಬಾಲಕನ ಬೈಕ್ ರೈಡಿಂಗ್- ಆರ್.ಸಿ. ಮಾಲಕನಿಗೆ ಬಿತ್ತು 26,500 ರೂ. ದಂಡ
Thursday, March 20, 2025
ಬಂಟ್ವಾಳ: ಅಪ್ರಾಪ್ತನೊಬ್ಬ ಬೈಕ್ ರೈಡಿಂಗ್ ಮಾಡಿ ಸಿಕ್ಕಿಬಿದ್ದಿದ್ದು, ಬಂಟ್ವಾಳ ಟ್ರಾಫಿಕ್ ಪೊಲೀಸರು ವಾಹನದ ಆರ್.ಸಿ. ಮಾಲಕನಿಗೆ 26,500ರೂ. ದಂಡ ವಿಧಿಸಿದ್ದಾರೆ.
ವಾಹನ ಮಾರಾಟ ಮಾಡಿದರೆ ಮುಗಿಯಿತು ಎಂದರೆ ಸಾಲದು, ಖರೀದಿ ಮಾಡಿದವನ ಹೆಸರು ಆರ್.ಸಿ.ಯಲ್ಲಿ ದಾಖಲಾಗಿದೆಯೇ ಎಂದು ಖಚಿತಪಡಿಸಿದಿದ್ದರೆ ಸಮಸ್ಯೆ ಬಂದು ಸುತ್ತಿಕೊಳ್ಳುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಬಂಟ್ವಾಳ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತನೊಬ್ಬ ಬೈಕ್ ಚಲಾಯಿಸಿದ್ದ ಈ ಪ್ರಕರಣದಲ್ಲಿ ವಾಹನದ ಆರ್.ಸಿ.ಯಲ್ಲಿ ಯಾರ ಹೆಸರಿತ್ತೋ ಅವರೇ ದಂಡ ಕಟ್ಟುವಂತಾಗಿದೆ.
ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಮೆಲ್ಕಾರ್‌ನಲ್ಲಿ ಪೋಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತನೊಬ್ಬ ಬೈಕ್ ರೈಡ್ ಮಾಡಿ ಸಿಕ್ಕಿಬಿದ್ದಿದ್ದಾನೆ. ವಿಪರ್ಯಾಸವೆಂದರೆ, ಬೈಕ್ ಆರ್.ಸಿ.ಯಲ್ಲಿ ಮೆಲ್ಕಾರ್‌ನ ಮಹಮ್ಮದ್ ಅಶ್ರಫ್ ಅವರ ಹೆಸರಿದ್ದು, ಅವರಿಗೆ 26,500ರೂ. ಫೈನ್ ಬಿದ್ದಿದೆ.
ಮಹಮ್ಮದ್ ಅಶ್ರಫ್ ಅವರು ಈ ಬೈಕನ್ನು ಆರು ತಿಂಗಳ ಹಿಂದೆಯೇ ಮತ್ತೊಬ್ಬರಿಗೆ ಮಾರಿದ್ದರು. ಪಡೆದುಕೊಂಡ ವ್ಯಕ್ತಿ 20 ಮತ್ತು 30ರ ನಿಯಮದ ಫಾರ್ಮ್ ಸಹಿ ಹಾಕಿಸಿಕೊಂಡು ವಾಹನದ ಹಣ ನೀಡಿದ್ದರು. ಬಳಿಕ ಆತ ಈವರೆಗೆ ಬೈಕನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರಲಿಲ್ಲ. ಜೊತೆಗೆ ಅಪ್ರಾಪ್ತ ಬಾಲಕನ ಕೈಗೂ ಬೈಕ್ ನೀಡಿದ್ದರು. ಇದೀಗ ಅಪ್ರಾಪ್ತ ಬಾಲಕ ವಾಹನ ಓಡಿಸಿದ್ದಕ್ಕೆ ಆರ್.ಸಿ.ಮಾಲಕನಿಗೆ ಅಡಿಷನಲ್ ಸಿವಿಲ್ ನ್ಯಾಯಾಲಯ ಹಾಗೂ ಜೆ.ಎಂಎಫ್.ಸಿ ಬಂಟ್ವಾಳ 26,500 ಸಾವಿರ ರೂ ದಂಡ ವಿಧಿಸಿದೆ.