ಮಂಗಳೂರು ಪೊಲೀಸರ ಭಾರೀ ಡ್ರಗ್ಸ್ ಬೇಟೆ ಬೆನ್ನಲ್ಲೇ ಬೆಂಗಳೂರು ಏರ್ಪೋರ್ಟ್ ಬಲೆಗೆ ಬಿದ್ದ ಆಫ್ರಿಕಾದ ಮಹಿಳಾ ಪ್ರಜೆ- ಈಕೆಯಲ್ಲಿತ್ತು ಬರೋಬ್ಬರಿ 38.8ಕೋಟಿ ಮೌಲ್ಯದ 3ಕೆಜಿ ಕೊಕೇನ್
Thursday, March 20, 2025
ಬೆಂಗಳೂರು: ವಿಮಾನದಲ್ಲಿ ಮಾದಕದ್ರವ್ಯ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿ ಭಾರಿ ಡ್ರಗ್ಸ್ ದಂಧೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಯಲಿಗೆಳೆದ ಬೆನ್ನಲ್ಲೇ ಬೆನ್ನಲ್ಲೇ ಬೆಂಗಳೂರು ಏರ್ಪೋರ್ಟ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಕಂದಾಯ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದು, 38.8 ಕೋಟಿ ಮೌಲ್ಯದ 3 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 18ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ದೇಶದಿಂದ ಬಂದಿದ್ದ ಮಹಿಳೆಯನ್ನು ತಪಾಸಣೆ ನಡೆಸಿದ್ದಾರೆ. ಆಗ ಆಕೆ ಅಕ್ರಮವಾಗಿ ಮಾದಕದ್ರವ್ಯ ಕೊಕೇನ್ ಅನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಆಫ್ರಿಕಾ ಘಾನ ದೇಶದ ಪ್ರಜೆಯಾಗಿದ್ದಾಳೆ.
ಖಚಿತ ಮಾಹಿತಿ ಆಧರಿಸಿ ಮಹಿಳೆಯ ಲಗೇಜ್ ಪರಿಶೀಲನೆ ನಡೆಸಿದ್ದು 38.8 ಕೋಟಿ ರೂ. ಮೌಲ್ಯದ 3 ಕೆಜಿ ಕೊಕೇನ್ ಪತ್ತೆಯಾಗಿದೆ. ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಡಿಆರ್ಐ ಮೂಲಗಳು ತಿಳಿಸಿದೆ. ಮಹಿಳೆಗೆ ಕಳ್ಳ ಸಾಗಣಿಕೆದಾರರೊಂದಿಗೆ ನಂಟು ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಂಗಳೂರು ಪೊಲೀಸರು ಇತ್ತೀಚೆಗೆ ರಾಜ್ಯದಲ್ಲೇ ಅತಿ ದೊಡ್ಡದು ಎನ್ನಲಾದ 75 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ತಂದು ಪೂರೈಕೆ ಮಾಡುತ್ತಿದ್ದ ದಕ್ಷಿಣ ಅಫ್ರಿಕಾ ಮೂಲದ ಪ್ರಜೆಗಳಿಬ್ಬರನ್ನು ಬಂಧಿಸಿ, 75 ಕೋಟಿ ಮೊತ್ತದ 37.870 ಕೆಜಿ ಎಡಿಎಂಎ ವಶಪಡಿಸಿಕೊಂಡಿದ್ದರು.