ನಂದಿನಿ ಹಾಲಿನ ದರ 4ರೂ. ಏರಿಕೆ- ಮಧ್ಯರಾತ್ರಿಯಿಂದಲೇ ಹೊಸ ದರ ಅನ್ವಯ
ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೀಗ ಮೂರನೇ ಬಾರಿಗೆ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಸಚಿವ ಸಂಪುಟದ ಸಭೆ ನಡೆಸಿದ ಬಳಿಕ ಕರ್ನಾಟಕ ಹಾಲು ಒಕ್ಕೂಟದ ಎಲ್ಲಾ ನಿಗಮಗಳಿಗೂ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀ.ಗೆ 4 ರೂ. ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಿದೆ. ಈ ಮೂಲಕ ಒಂದೆರಡು ದಿನಗಳಲ್ಲಿಯೇ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 3ನೇ ಬಾರಿಗೆ ಹಾಲಿನ ದರವನ್ನು ಹೆಚ್ಚಳ ಮಾಡಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಲ್ಲಿ ನಂದಿನಿ ಹಾಲಿಗೆ 2 ರೂ. ಹೆಚ್ಚಳ ಮಾಡಿತ್ತು. ಆರೇಳು ತಿಂಗಳ ಹಿಂದೆ ಮತ್ತೆ 50 ಗ್ರಾಂ ಹಾಲು ಹೆಚ್ಚಳ ಮಾಡಿ, ಅದಕ್ಕೆ 2ರೂ. ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಮೂರನೇ ಬಾರಿಗೆ 4 ರೂ. ಹೆಚ್ಚಳ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಲಿನ ದರವನ್ನು ಹೆಚ್ಚಳ ಮಾಡಲು ಕರ್ನಾಟಕ ಹಾಲು ಒಕ್ಕೂಟದ ಅಧಿಕಾರಿಗಳು, ಹಾಲು ಒಕ್ಕೂಟ ಜತೆ ಸಭೆ ನಡೆಸಿದ್ದರು. ಈ ವೇಳೆ ಹಾಲು ಒಕ್ಕೂಟ ಪ್ರತಿ ಲೀಟರಿಗೆ 5 ರೂ. ಹೆಚ್ಚಿಸುವಂತೆ ಸರ್ಕಾರದ ಮುಂದೆ ಬೆಡಿಕೆ ಇಟ್ಟಿತ್ತು. ಈ ವೇಳೆ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು. ಇದೀಗ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ನಂದಿನಿ ಹಾಲಿನ ದರವನ್ನು 4 ರೂ. ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ.
ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸಚಿವ ಸಂಪುಟದಿಂದ ಅನುಮೋದನೆ ನೀಡಿದ ಬೆನ್ನಲ್ಲಿಯೇ ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಅನ್ವಯವಾಗಲಿದೆ. ಈ ಮೂಲಕ ಯುಗಾದಿ ಹಬ್ಬಕ್ಕೆ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬರೆಯನ್ನು ಎಳೆದು ಶಾಕ್ ನೀಡಿದೆ. ರಾಜ್ಯದಲ್ಲಿ 5 ಉಚಿತ ಗ್ಯಾರಂಟಿಗಳನ್ನು ನೀಡಿ, ರಾಜ್ಯದ ದುಡಿಯುವ ವರ್ಗದ ಜನರ ಸುಲಿಗೆ ಮಾಡುತ್ತಿದ್ದಾರೆ. ಇದೀಗ ಹಾಲಿನ ದರ ಹೆಚ್ಚಳದ ಬೆನ್ನಲ್ಲಿಯೇ ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸುವ ಹೋಟೆಲ್‌ನ ಉತ್ಪನ್ನಗಳಾದ ಚಹಾ-ಕಾಫಿ, ಬೇಕರಿ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ.