ರಜೆ ಅರ್ಜಿ ಬರೆದು ತಗ್ಲಾಕೊಂಡ್ಲು ಲೇಡಿ ಸಬ್ ಇನ್‌ಸ್ಪೆಕ್ಟರ್: ಅರೆಸ್ಟ್ ಆಗಿದ್ದೇಕೆ ಗೊತ್ತಾ?
Tuesday, March 25, 2025
ರಾಜಸ್ಥಾನ : ಗ್ರಹಚಾರ ಕೆಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ. ಲೇಡಿ ಎಸ್‌ಐ ಓರ್ವರು, ರಜೆ ಅರ್ಜಿ ಬರೆದು ತಗ್ಲಾಕ್ಕೊಂಡು ತಮ್ಮ ಕೆಲಸದಿಂದಲೇ ವಜಾ ಆಗುವ ಸ್ಥಿತಿಯಲ್ಲಿದ್ದಾರೆ. ಸದ್ಯ ಈಕೆ ಕೂಡಾ ಅರೆಸ್ಟ್ ಆಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈಕೆ ಬರೆದಿರುವ ರಜಾ ಚೀಟಿಯಲ್ಲಿ ಭಾರೀ ಕಾಗುಣಿತ ದೋಷವಿತ್ತು. ಕೇವಲ ಕಾಗುಣಿತ ದೋಷವಿದ್ದ ಮಾತ್ರಕ್ಕೆ ಕೆಲಸದಿಂದ ವಜಾ ಮಾಡುವುದಂದರೆ ಅರ್ಥವೇನು ಎಂದು ನೀವು ಕೇಳಬಹುದು. ಆದರೆ ಅಲ್ಲಿರುವ ಅಸಲಿಯತ್ತೇ ಬೇರೆಯಿದೆ.
ಅಂದ ಹಾಗೆ ಈ ಸಬ್ ಇನ್ಸ್‌ಪೆಕ್ಟರ್ ಹೆಸರು ಮೋನಿಕಾ. ಈಕೆ ರಜೆಗಾಗಿ ಬರೆದಿದ್ದ ಚೀಟಿಯಲ್ಲಿ ಸಿಕ್ಕಾಪಟ್ಟೆ ತಪ್ಪು ಇದ್ದದ್ದು ನೋಡಿ ಹಿರಿಯ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಇಷ್ಟೆಲ್ಲಾ ತಪ್ಪು ಬರೆದಿರುವ ಆಕೆ ಅತ್ಯಧಿಕ ಅಂಕ ಗಳಿಸಿ, ಪಾಸಾದದ್ದು ಹೇಗೆ ಎಂಬ ಅನುಮಾನ ಕಾಡಿದೆ.
ಮೋನಿಕಾ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆಯಲ್ಲಿ ಹಿಂದಿಯಲ್ಲಿ 184 ಮತ್ತು ಸಾಮಾನ್ಯ ಜ್ಞಾನದಲ್ಲಿ 161 ಅಂಕ ಗಳಿಸಿದ್ದರು. ಆದರೆ ಸಂದರ್ಶನದಲ್ಲಿ ಕೇವಲ 15 ಅಂಕಗಳನ್ನು ಪಡೆದಿದ್ದರು. ಆದರೆ ಪರೀಕ್ಷೆಗಳ ಅಂಕದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದರು. ಅಲ್ಲಿರುವ ಹಿರಿಯ ಅಧಿಕಾರಿಗಳಿಗೆ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಎನ್ನಿಸಿದೆ.
ಕೊನೆಗೆ ತನಿಖೆ ಮಾಡಿದಾಗ ಬಯಲಾಗಿದ್ದು ಇಷ್ಟೇ. ಮೋನಿಕಾ ಅವರು 2021ರ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ಸಾಧನವನ್ನು ಬಳಸಿ ಅಷ್ಟು ಅಂಕ ಗಳಿಸಿದ್ದರು. ಅಲ್ಲದೇ ಪರೀಕ್ಷಾ ವಂಚನೆಗಾಗಿ 15 ಲಕ್ಷ ರೂಪಾಯಿ ಲಂಚ ಕೊಟ್ಟಿರುವುದೂ ಬೆಳಕಿಗೆ ಬಂದಿದೆ.
ವಿಶೇಷ ಕಾರ್ಯಾಚರಣೆ ಗುಂಪು (SOG) ಮೋನಿಕಾ ಮತ್ತು ಅವರ ಆಕೆಯ ಸಹಚರ ಪೌರವ್ ಕಲಿರ್‌ರನ್ನು ಬಂಧಿಸಿದೆ. ಪ್ರಕರಣ ಇನ್ನೂ ತನಿಖೆಯಲ್ಲಿದೆ. ಸದ್ಯ ತನಿಖೆ ನಡೆಯುತ್ತಿದ್ದು, ಇದರ ಆಧಾರದ ಮೇಲೆ, ಆರೋಪ ಸಾಬೀತಾದರೆ ಮೋನಿಕಾ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.