ಮಂಗಳೂರು: ಗೂಂಡಾಗಿರಿ ನಡೆಸಿ ಮನೆಯ ಕಂಪೌಂಡ್ ಧ್ವಂಸ- ಪ್ರಕರಣ ದಾಖಲು
Wednesday, March 19, 2025
ಮಂಗಳೂರು: ರಸ್ತೆ ವಿಸ್ತರಣೆಯ ನೆಪವೊಡ್ಡಿ ವ್ಯಕ್ತಿಯೋರ್ವನು ಗೂಂಡಾಗಿರಿ ಮನೆಯೊಂದರ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಮಂಗಳೂರಿನ ಪಚ್ಚನಾಡಿ ವೈದ್ಯನಾಥ ನಗರದಲ್ಲಿ ನಡೆದಿದೆ.
ಪಚ್ಚನಾಡಿಯ ವೈದ್ಯನಾಥ ನಗರ ನಿವಾಸಿ ಗಣೇಶ್ ಎಂಬಾತ ವಿಜೇಶ್ ಸಲ್ಡಾನ ಎಂಬವರ ಮನೆಯ ಕಾಂಪೌಂಡ್ ಅನ್ನು ಧ್ವಂಸಗೊಳಿಸಿದ್ದಾನೆ. ಮಾತ್ರವಲ್ಲದೆ ಅವರು ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತನೊಂದಿಗೆ ಸೇರಿ ಸ್ಥಳೀಯರು ಕೆಲವರು ಈ ದಾಂಧಲೆ ನಡೆಸಿದ್ದಾರೆ. ಮಹಾನಗರ ಪಾಲಿಕೆಯಿಂದ ಯಾವುದೇ ವರ್ಕ್ ಆರ್ಡರ್ ಇಲ್ಲದೇ ಮಾಜಿ ಕಾರ್ಪೊರೇಟರ್ ಸಂಗೀತ ನಾಯಕ್ ಅವರ ಪತಿ ರವೀಂದ್ರ ನಾಯಕ್ ಕುಮ್ಮಕ್ಕಿನಿಂದ ಈ ಕೃತ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ವಿಜೇಶ್ ಸಲ್ಡಾನರ ಪತ್ನಿ ಸ್ಪೂರ್ತಿಯವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿದ ಗಣೇಶ್, ರವೀಂದ್ರ ನಾಯಕ್ ಸೇರಿ 17 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.