ಹುಟ್ಟಿದ ಮೂರೇ ದಿನಕ್ಕೇ ಹಾಲು ಕೊಡುತ್ತಿದೆ ಈ ಕರು: ದಿನಕ್ಕೆ ಅರ್ಧ ಲೀಟರ್‌ಗೂ ಅಧಿಕ ಹಾಲು ನೀಡುತ್ತಿದೆ ಕಲಿಯುಗದ ಕಾಮಧೇನು
Monday, March 10, 2025
ಚಿತ್ರದುರ್ಗ: ಪ್ರಪಂಚದಲ್ಲಿ ಹಲವಾರು ವಿಸ್ಮಯಗಳು ನಡೆಯುತ್ತಲೇ ಇರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಜನತೆ ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿರುತ್ತಾರೆ. ಇದೀಗ ಕರು ಹಾಕಿದ ತಕ್ಷಣ ಹಸು ಹಾಲು ಕೊಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಂದು ಕರುವೊಂದು ಜನಿಸಿದ ಮೂರೇ ದಿನಕ್ಕೆ ತನ್ನ ಕೆಚ್ಚಲಿನಿಂದ ಹಾಲು ಇಳಿಸಿರುವ ಅಚ್ಚರಿಗೊಳಿಸಿದೆ. ಹಾಲು ಕುಡಿಯುವುದಕ್ಕೇ ಪರದಾಡಬೇಕಾದ ಹೊತ್ತಿನಲ್ಲಿ ರೈತ ಹಾಲು ಕರೆಯುವಾಗ ಸ್ವತಃ ಹಾಲು ಇಳಿಸುವುದನ್ನು ಕಂಡು ಜನರು ದಿಗ್ಭ್ರಮೆಗೊಂಡಿದ್ದಾರೆ.
ಆದ್ದರಿಂದ ಇದೇನೋ ಪವಾಡ ನಡೆದಿದೆ ಎಂದು ಸ್ಥಳೀಯರು ಕರುವಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದ್ದಾರೆ. ಇದೇ ವೇಳೆ, ಈ ವಿಶಿಷ್ಟ ಕರುವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮದಲ್ಲಿ ಇಂಥದ್ದೊಂದು ಪವಾಡ ನಡೆದಿದ್ದು ಅಚ್ಚರಿ ಸೃಷ್ಟಿಸಿದೆ. ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬವರ ಮನೆಯಲ್ಲಿ ಡೈರಿ ಹಸುವೊಂದು ಮರಿ ಹಾಕಿದೆ. ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. ಕರುವಿನ ಕೆಚ್ಚಲಿನಿಂದ ಹಾಲು ಸುರಿಯುತ್ತಿದ್ದುದನ್ನು ಕಂಡ ನಿರಂಜನ ಮೂರ್ತಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ತಾಯಿ ಹಸುವಿನ ಹಾಲು ಕುಡಿಯಬೇಕಾದ ಈ ಕರು ಕಳೆದ 31 ದಿನಗಳಿಂದ ಸ್ವತಃ ಹಾಲು ಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ.
ನಿರಂಜನ ಮೂರ್ತಿ 6ತಿಂಗಳ ಹಿಂದೆ ಹಸುವನ್ನು ಖರೀದಿಸಿದ್ದರು. ಈಗಾಗಲೇ ಆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಈ ಹಿಂದಿನ ಎರಡೂ ಹೆಣ್ಣು ಕರುಗಳು ಸಹಜವಾಗಿದ್ದು, ಮೂರನೆಯದ್ದು ಮಾತ್ರ ಕಾಮಧೇನುವಿನಂತೆ ಹುಟ್ಟಿದ ಮೂರೇ ದಿನಕ್ಕೆ ಹಾಲು ನೀಡುತ್ತಿದೆ. ದಿನಕ್ಕೆ ಅರ್ಧ ಲೀಟರ್‌ಗೂ ಅಧಿಕ ಹಾಲು ಕರೆಯುವ ಕರುವನ್ನು ಗ್ರಾಮಸ್ಥರು ಕಾಮಧೇನುವೆಂದು ಪೂಜೆ ಮಾಡುತ್ತಿದ್ದಾರೆ.
ಹಸು ಗರ್ಭ ಧರಿಸಿ ಕರು ಹಾಕಿದರೆ ಮಾತ್ರ ಹಾಲು ನೀಡುತ್ತವೆ. ಅದರಲ್ಲೂ ಕರುವನ್ನೇ ಮೊದಲು ಜಗಿಯುವಂತೆ ಮಾಡಿ ಕೆಚ್ಚಲಿನಲ್ಲಿ ಹಾಲು ಇಳಿಸಬೇಕಾದ ಪದ್ಧತಿ ಇದೆ. ಈಗೆಲ್ಲ ಹೈಬ್ರಿಡ್ ದನಗಳು ಬಂದಿದ್ದು ಹಾಲಿನ ಉದ್ದೇಶಕ್ಕಾಗಿಯೇ ಸಾಕುತ್ತಾರೆ. ಆದರೆ, ಇದ್ಯಾವುದೂ ಇಲ್ಲದೆ ಕರುವೊಂದು ಹಾಲು ಕೊಡುವುದು ಜಗದ ಸೋಜಿಗಕ್ಕೆ ಸಾಕ್ಷಿಯಾಗಿದೆ.