ನಟ ದರ್ಶನ್ ಮದರ್ ಇಂಡಿಯಾ ಸುಮಲತಾರನ್ನು ಅನ್‌ಫಾಲೋ ಮಾಡಿದ್ದೇಕೆ? ಕಾರಣ ಇಲ್ಲಿದೆ ನೋಡಿ
Wednesday, March 12, 2025
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಇಂದಿನಿಂದ ಡೆವಿಲ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಇದು ಕೂಡ ಸುದ್ದಿಯಾಗಿದೆ. ಆದರೆ, ಇದೆಲ್ಲದಕ್ಕಿಂತ ಕುತೂಹಲಕಾರಿ ವಿಚಾರವೇನೆಂದರೆ, ನಟ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ಸುಮಲತಾ ಅಂಬರೀಷ್ ಅವರನ್ನು ಅನ್ ಫಾಲೋ ಮಾಡಿದ್ದಾರೆ.
ದರ್ಶನ್ ಕೇವಲ ಸುಮಲತಾ ಅಂಬರೀಷ್‌ರನ್ನು ಮಾತ್ರವಲ್ಲ ಒಟ್ಟು ಆರು ಮಂದಿಯನ್ನು ಅನ್‌ಫಾಲೋ ಮಾಡಿದ್ದಾರೆ. ಅವರು ಯಾರೆಂದರೆ, ಅಭಿಷೇಕ್ ಅಂಬರೀಷ್, ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಹಾಗೂ ತಮ್ಮ ದಿನಕರ್ ತೂಗುದೀಪ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ. ಇದರಲ್ಲಿ ಪುತ್ರ ವಿನೀಶ್, ಡಿ ಕಂಪನಿ ಹಾಗೂ ಸಹೋದರ ದಿನಕರ್‌ರನ್ನು ಯಾಕೆ ಅನ್‌ಫಾಲೋ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ, ಸುಮಲತಾ ಅಂಬರೀಷ್, ಅಭಿಷೇಕ್ ಮತ್ತು ಅವಿವಾರನ್ನು ಅನ್‌ಫಾಲೋ ಮಾಡುವುದಕ್ಕೆ ಕೆಲವು ಕಾರಣಗಳಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಅಂದ ಹಾಗೆ ದರ್ಶನ್ ಹಾಗೂ ಸುಮಲತಾರ ಸಂಬಂಧದ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ದರ್ಶನ್ ಅವರು ಸುಮಲತಾರನ್ನು ಮದರ್ ಇಂಡಿಯಾ ಎಂದೇ ಕರೆಯುತ್ತಿದ್ದರು. ಅದೇ ರೀತಿ ಅಭಿಷೇಕ್‌ರನ್ನು ಜೂನಿಯರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. 2019ರಲ್ಲಿ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದರ್ಶನ್ ಪ್ರಚಾರ ಮಾಡಿದ್ದರು. ಈ ಮೂಲಕ ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಂಬರೀಷ್ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ದರ್ಶನ್‌ಗೆ ವಿಶೇಷ ಸ್ಥಾನವಿತ್ತು. ದರ್ಶನ್ ತನ್ನ ಮೊದಲ ಮಗ ಎಂದೇ ಸುಮಲತಾ ಅವರು ಎಷ್ಟೋ ಸಂದರ್ಭದಲ್ಲಿ ಹೇಳಿದ ಉದಾಹರಣೆಗಳಿವೆ. ಒಟ್ಟಾರೆ ದರ್ಶನ್ ಮತ್ತು ಅಂಬರೀಷ್ ಕುಟುಂಬದ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು. ಆದರೆ, ಆ ಬಾಂಧವ್ಯ ಈಗ ಮುರಿದು ಬಿದ್ದಿರುವಂತೆ ಕಾಣುತ್ತಿದೆ. ಏಕೆಂದರೆ, ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಇದ್ದಕ್ಕಿದ್ದಂತೆ ಸುಮಲತಾ ಸೇರಿ ಇಡೀ ಅವನ ರೀಚ್ ಕುಟುಂಬವನ್ನು ಅನ್‌ಫಾಲೋ ಮಾಡಿದ್ದಾರೆ.
ನಟ ದರ್ಶನ್, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ದರ್ಶನ್ ಅವರನ್ನು ಕಂಡು, ಸಾಂತ್ವಾನ ಹೇಳಲು ಅಂದರೆ, ಧೈರ್ಯ ತುಂಬಲು ಸಾಕಷ್ಟು ಕಲಾವಿದರು ಜೈಲಿಗೆ ಭೇಟಿ ನೀಡಿ ಬಂದಿದ್ದರು. ಹಾಸ್ಯ ನಟ ಸಾಧುಕೋಕಿಲ, ನಟಿ ರಚಿತಾ ರಾಮ್, ನಟ ಧನ್ನೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ವಿನೋದ್ ಕುಮಾರ್, ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಸೇರಿದಂತೆ ಅನೇಕ ಮಂದಿ ಜೈಲಿಗೆ ಭೇಟಿ ನೀಡಿ ಬಂದಿದ್ದರು. ಆದರೆ, ದರ್ಶನ್ ರನ್ನು ಮಗ ಎಂದು ಹೇಳುತ್ತಿದ್ದ ಸುಮಲತಾ ಮಾತ್ರ ಒಮ್ಮೆಯೂ ಜೈಲಿಗೆ ಭೇಟಿ ನೀಡಲಿಲ್ಲ. ಅವರ ಕುಟುಂಬದ ಯಾರೋಬ್ಬರು ಕೂಡ ಜೈಲಿನ ಹತ್ತಿರವೂ ಸುಳಿಯಲಿಲ್ಲ. ಒಂದೆರೆಡು ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಸುಮಲತಾ ಮಾತನಾಡಿದರು. ಆದರೆ, ಹೆಚ್ಚಿಗೆ ಮಾತನಾಡದೇ ಪ್ರಕರಣದಿಂದ ಅಂತರ ಕಾಯ್ದುಕೊಂಡರು. ಸಂಕಷ್ಟ ಕಾಲದಲ್ಲಿ ಜೈಲಿನಿಂದ ಬಿಡಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಕನಿಷ್ಠ ಪಕ್ಷ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ ಎಂಬ ಅಸಮಾಧಾನ ದರ್ಶನ್ ಅವರಲ್ಲಿದೆ ಎನ್ನಲಾಗಿದೆ. ಈ ಹಿಂದೆ ಚುನಾವಣೆಯಲ್ಲಿ ಬೆನ್ನುಲುಬಾಗಿ ನಿಂತು ಗೆಲ್ಲುವರೆಗೂ ಶ್ರಮ ಹಾಕಿದ್ದರು ದರ್ಶನ್. ಆದರೆ, ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಲ್ಲದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಆ ಒಂದು ಅಸಮಾಧಾನವನ್ನು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಕೇವಲ ಅಂಬರೀಷ್ ಕುಟುಂಬವನ್ನು ಮಾತ್ರ ಅನ್‌ಫಾಲೋ ಮಾಡಿದರೆ ಭಾರಿ ಚರ್ಚೆಯಾಗುತ್ತದೆ ಅನ್ನೋ ಕಾರಣಕ್ಕೆ ತಾನು ಫಾಲೋ ಮಾಡುತ್ತಿದ್ದ ಅಷ್ಟೂ ಮಂದಿಯನ್ನು ದರ್ಶನ್ ಅನ್‌ಫಾಲೋ ಮಾಡಿದ್ದಾರೆ ಎಂದು ಬಿಸಿಬಿಸಿ ಚರ್ಚೆಯಾಗುತ್ತಿದೆ.
ನಟ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡುತ್ತಿದ್ದಂತೆ ಇತ್ತ ಸುಮಲತಾ ಅಂಬರೀಷ್ ಕೂಡ ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸತ್ಯವನ್ನು ತಿರುಚುವ, ಪಶ್ಚಾತ್ತಾಪವಿಲ್ಲದೆ ಜನರನ್ನು ನೋಯಿಸುವ, ಆರೋಪವನ್ನು ಹೊರಿಸುವ ಮತ್ತು ಹೇಗಾದರೂ ತಮ್ಮನ್ನು ತಾವು ನಾಯಕ ಎಂದು ಪರಿಗಣಿಸುವವರಿಗೆ ಆಸ್ಕರ್ ಪ್ರಶಸ್ತಿ ನೀಡಬೇಕೆಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಮಾತನ್ನು ಯಾರಿಗೆ ಉದ್ದೇಶಿಸಿ ಹೇಳಿದ್ದಾರೆಂದು ಅವರಿಗೆ ಮಾತ್ರ ಗೊತ್ತು. ಆದರೆ, ಅನ್‌ಫಾಲೋ ಮಾಡಿದ ಬೆನ್ನಲ್ಲೇ ಪೋಸ್ಟ್ ಮಾಡಿರುವುದರಿಂದ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇನ್ನು ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಅವರಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದೆ. ತನ್ನ ಸುತ್ತಲೂ ಇರುವ ಕೆಲವು ಮಂದಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಪವಿತ್ರಾ ಗೌಡಳಿಂದಲೂ ದರ್ಶನ್ ದೂರವಾಗಿದ್ದಾರೆ. ಇನ್ನು ದರ್ಶನ್ ಅವರ ಎಲ್ಲ ಕೆಲಸಗಳನ್ನು ಸ್ವತಃ ಅವರ ಪತ್ನಿ ವಿಜಯಲಕ್ಷ್ಮೀ ಅವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್ ಆರಂಭಿಸಿದ್ದು, ಮತ್ತೆ ಸಿನಿಮಾಗಳತ್ತ ಬಿಜಿಯಾಗಿದ್ದಾರೆ. ಇದರ ನಡುವೆ ರೇಣುಕಾಸ್ವಾಮಿ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಆಗಾಗ ಡಿ-ಗ್ಯಾಂಗ್ ಕೋರ್ಟ್‌ಗೆ ಭೇಟಿ ಕೊಟ್ಟು ಬರುತ್ತಿರುತ್ತದೆ.