ರಸ್ತೆ ಕಾಮಗಾರಿ ವೇಳೆ ಚಾಲಕನ ಎಡವಟ್ಟು- ಜೆಸಿಬಿ ವಿದ್ಯುತ್ ಕಂಬಕ್ಕೆ ಡಿಕ್ಕಿ, ಗರ್ಭಿಣಿ ಸೇರಿ ಇಬ್ಬರು ಬಲಿ
Tuesday, March 18, 2025
ಬೆಂಗಳೂರು: ರಸ್ತೆ ಕಾಮಗಾರಿ ಸಂದರ್ಭ ಜೆಸಿಬಿ ಚಾಲಕನ ಎಡವಟ್ಟಿನಿಂದ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ.
ಸುದ್ದಗುಂಟೆಪಾಳ್ಯ ನಿವಾಸಿಗಳಾದ ಸುಮತಿ (35) ಹಾಗೂ ಸೋನಿ ಕುಮಾರಿ (35) ಮೃತಪಟ್ಟವರು.
ಸುದ್ದಗುಂಟೆಪಾಳ್ಯ ಮುಖ್ಯರಸ್ತೆಯ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಜೆಸಿಬಿ ವಾಹನ ಹಿಮ್ಮುಖವಾಗಿ ಚಲಿಸುವಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರಿಂದ ವಿದ್ಯುತ್ ಕಂಬ ಮುರಿದು ಅಲ್ಲಿಯೇ ನಡೆದು ಬರುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿಹಾರ ರಾಜ್ಯದ ಸೋನಿ ಕುಮಾರಿ ಕಳೆದ ಎಂಟು ವರ್ಷಗಳಿಂದ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಸದ್ಯ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ. ತಮಿಳುನಾಡಿನ ಸುಮತಿ, ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದರು. ಇಬ್ಬರೂ ಮಹಿಳೆಯರು ಸೋಮವಾರ ಸಂಜೆ ತಮ್ಮ ಮಕ್ಕಳನ್ನು ಟ್ಯೂಷನ್‌ನಿಂದ ಕರೆದುಕೊಂಡು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ರಸ್ತೆ ಕಾಮಗಾರಿಯ ವೇಳೆ ಜೆಸಿಬಿ ಡ್ರೈವರ್ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ. ಈ ವೇಳೆ ಲೈಟ್ ಕಂಬದಿಂದ ಮನೆಗಳಿಗೆ ಕನೆಕ್ಟ್ ಆಗಿದ್ದ ವೈಯರ್‌ಗೆ ಜೆಸಿಬಿಯ ಮುಂಭಾಗ ಟಚ್ ಆಗಿದೆ. ಜನರು ಜೋರಾಗಿ ಕೂಗಿಕೊಂಡರೂ ಡ್ರೈವರ್ ಕೇಳಿಸಿಕೊಳ್ಳದೇ ವೈಯರ್ ಎಳೆದಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.
ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.