ಮಂಗಳೂರು: ಕುತೂಹಲ ಕೆರಳಿಸಿದ್ದ ದಿಗಂತ್ ನಾಪತ್ತೆಗೆ ಬಿಗ್ ಟ್ವಿಸ್ಟ್- ಪೊಲೀಸ್ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಬಯಲು
Sunday, March 9, 2025
ಮಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪರಂಗಿಪೇಟೆ ಕಿದೆಬೆಟ್ಟಿನ ದಿಗಂತ್ ನಿಗೂಢ ನಾಪತ್ತೆಗೆ ಬಿಗ್ ಟ್ವಿಸ್ಟ್ ದೊರಕಿದ್ದು, ಪರೀಕ್ಷೆ ಭೀತಿಯಿಂದ ಮನೆ ತೊರೆದಿರುವುದಾಗಿ ತನಿಖೆಯ ವೇಳೆ ದಿಗಂತ್ ಬಾಯಿಬಿಟ್ಟಿದ್ದಾನೆಂದು ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್. ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಆತ ಮೊದಲಿಗೆ ತನ್ನನ್ನು ಯಾರೋ ಬಲವಂತವಾಗಿ ಕರೆದೊಯ್ದಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ಆತನಿಗೆ ಸಮಾಧಾನಿಸಿ ನಿಧಾನವಾಗಿ ಬಾಯಿ ಬಿಡಿಸಿದಾಗ ಪರೀಕ್ಷೆಗೆ ಸರಿಯಾಗಿ ತಯಾರಾಗದಿದ್ದ ಕಾರಣ ಭಯದಿಂದ ಮನೆ ತೊರೆದಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಫೆ.25ರಂದು ಸಂಜೆ ವೇಳೆ 500ರೂ. ಹಣದೊಂದಿಗೆ ಮನೆ ಬಿಟ್ಟವನು, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದು ಅರ್ಕುಳ ತಲುಪಿದ್ದಾನೆ. ಅಲ್ಲಿ ಮುಖ್ಯರಸ್ತೆಗೆ ಬಂದು ಬೈಕೊಂದರಲ್ಲಿ ಲಿಫ್ಟ್ ಪಡೆದು ಮಂಗಳೂರು ನಗರಕ್ಕೆ ಬಂದಿದ್ದಾನೆ. ಅಲ್ಲಿಂದ ಬಸ್‌ನಲ್ಲಿ ಶಿವಮೊಗ್ಗಕ್ಕೆ ಹೋಗಿದ್ದಾನೆ. ಅಲ್ಲಿ ರೈಲು ಹತ್ತಿ ಮೈಸೂರಿಗೆ ತೆರಳಿದ್ದಾನೆ. ಅಲ್ಲಿಂದ ಕೆಂಗೇರಿಗೆ ಹೋಗಿದ್ದಾನೆ. ಬಳಿಕ ನಂದಿಹಿಲ್ಸ್ ಬೆಟ್ಟಕ್ಕೆ ಹೋಗಿ ಖಾಸಗಿ ರೆಸಾರ್ಟ್ ಒಂದರಲ್ಲಿ 2ದಿನ ಕೆಲಸ ಮಾಡಿ, ಹಣ ಪಡೆದುಕೊಂಡಿದ್ದಾನೆ. ಬಳಿಕ ವಾಪಾಸ್ ನಂದಿಹಿಲ್ಸ್‌ನಿಂದ ಕೆಂಗೇರಿ, ಅಲ್ಲಿಂದ ಮೈಸೂರಿಗೆ ಬಂದಿದ್ದಾನೆ. ಅಲ್ಲಿ ಶುಕ್ರವಾರ ರಾತ್ರಿ ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ.
ಉಡುಪಿಯಲ್ಲಿ ತಿನ್ನಲು ಹಾಗೂ ಬಟ್ಟೆ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ಹಣ ಕಡಿಮೆಯಾಗಿ ಓಡಲು ಅನುವಾದಾಗ ಸಿಬ್ಬಂದಿ ತಡೆದು ವಿಚಾರಿಸಿ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಬಳಿಕ ದ.ಕ.ಜಿಲ್ಲಾ ಪೊಲೀಸರು ಆತನನ್ನು ಕರೆತಂದು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಬೋಂದೆಲ್‌ಗ ಬಾಲ ಗೃಹದಲ್ಲಿ ಇರಿಸಲಾಗಿದೆ. ಹೆತ್ತವರು ಆತನ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ನಾವು ಹೈಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಲಯ ಏನೂ ಸೂಚಿಸಿತ್ತೋ ಅದರಂತೆ ಮುಂದುವರಿಯಲಿದ್ದೇವೆ ಎಂದು ಎಸ್ಪಿ ಯತೀಶ್ ಹೇಳಿದ್ದಾರೆ.
ನಾಪತ್ತೆಯಾದ ಸಂದರ್ಭ ದೊರಕಿದ ಆತನ ಚಪ್ಪಲಿಯಲ್ಲಿನ ರಕ್ತದ ಕಲೆಯ ಬಗ್ಗೆ ಮಾಹಿತಿ ನೀಡಿದ ಎಸ್ಪಿ, ಈ ಬಗ್ಗೆ ನಾವು ಆತನನ್ನು ವಿಚಾರಿಸಿದ್ದೇವೆ. ಆಗ ಇಮ್ಮಡಿಯಲ್ಲಿ ಆದ ಗಾಯದಿಂದ ರಕ್ತ ಒಸರಿ ಅಂಟಿಕೊಂಡ ರಕ್ತ ಎಂದು ಆತ ಹೇಳಿಕೆ ನೀಡಿದ್ದಾಗಿ ಹೇಳಿದ್ದಾರೆ.