ಮಂಗಳೂರು: ಐಷಾರಾಮಿ ಜೀವನಕ್ಕೆ ಮಾದಕದ್ರವ್ಯ ದಂಧೆ- ಖದೀಮರಿಬ್ಬರು ಸಿಸಿಬಿ ಬಲೆಗೆ
Friday, March 28, 2025
ಮಂಗಳೂರು: ಐಷಾರಾಮಿ ಜೀವನ ನಡೆಸಲು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಹೈಡ್ರೋವೀಡ್ ಗಾಂಜಾ ಚರಸ್ ಹಾಗೂ ಗಾಂಜಾ ಮಾರುತ್ತಿದ್ದ ಖದೀಮರಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 9ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಂಡೇಶ್ವರ, ಸುಭಾಷ್ ನಗರ ನಿವಾಸಿ ತೈಸಿರ್ ಇಸ್ಮಾಯಿಲ್ ಹುಸೈನ್(23), ಶಿವಭಾಗ್‌ನ ಮೋತಿಶ್ಯಾಂ ಕಾಸ್ಟೆಲ್ ಆಪಾರ್ಟ್‌ಮೆಂಟ್ ನಿವಾಸಿ ರೋಯಸ್ಟನ್ ಕ್ಸವಿಯರ್ ಲೋಬೋ(22)ಬಂಧಿತ ಆರೋಪಿಗಳು.
ಬೆಂಗಳೂರಿನಿಂದ ಮಾದಕದ್ರವ್ಯ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಖರೀದಿಸಿ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಶಿವಭಾಗ್ 5ನೇ ಕ್ರಾಸ್ ರಸ್ತೆಯಲ್ಲಿದ್ದ ಖದೀಮರಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ 8,00,000ರೂ. ಮೌಲ್ಯದ ನಿಷೇಧಿತ ಮಾದಕದ್ರವ್ಯ ಹೈಡ್ರೋವೀಡ್ ಗಾಂಜಾ, ಚರಸ್, ಗಾಂಜಾ ಮತ್ತು 2ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 9ಲಕ್ಷ ರೂ. ಆಗಬಹುದು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳು ಐಷಾರಾಮಿ ಜೀವನ ಸಾಗಿಸುವ ಉದ್ದೇಶದಿಂದ ಮಾದಕದ್ರವ್ಯ ಮಾರಾಟದ ದಂಧೆ ನಡೆಸುತ್ತಿದ್ದರು.