ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಹಿರಿಯಡ್ಕದಲ್ಲಿ ಶೂಟೌಟ್- ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾತನ ಖೆಡ್ಡಾಕ್ಕೆ ಕೆಡವಿದ ಪೊಲೀಸರು
Wednesday, March 12, 2025
ಉಡುಪಿ: ಇತ್ತೀಚೆಗೆ ಮಣಿಪಾಲದಲ್ಲಿ ಸಿನಿಮೀಯ ಶೈಲಿಯಲ್ಲಿ ವಾಹನವನ್ನು ಪೊಲೀಸರು ಚೇಸಿಂಗ್ ಮಾಡಿ ಬಂಧಿಸಲು ಯತ್ನಿಸಿದರೂ ತಪ್ಪಿಸಿಕೊಂಡ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಹಿರಿಯಡ್ಕದಲ್ಲಿ ಮಣಿಪಾಲ ಪೊಲೀಸರು ಫೈರಿಂಗ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬುಧವಾರ ಸಂಜೆ ಇಸಾಕ್ ಹಿರಿಯಡ್ಕದಲ್ಲಿರುವ ಬಗ್ಗೆ ಮಾಹಿತಿ ಪಡೆದು ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಕ್ಕಾಗಿ ಮಣಿಪಾಲ ಇನ್‌ಸ್ಪೆಕ್ಟರ್ ದೇವರಾಜು ಫೈರ್ ಮಾಡಿದ್ದಾರೆ.
ಮಾ.4ರಂದು ಥಾರ್ ಜೀಪಿನಲ್ಲಿ ಕಾಸರಗೋಡು ಮೂಲದ ತನ್ನ ಪ್ರೇಯಸಿಯೊಂದಿಗೆ ಇಸಾಕ್ ಮಣಿಪಾಲಕ್ಕೆ ಬಂದಿದ್ದ. ಆಗ ಈತ ಬಂಧನಕ್ಕೆ ಬೆಂಗಳೂರಿನ ನೆಲಮಂಗಲ ಪೊಲೀಸರು ಬಲೆ ಬೀಸಿದ್ದರು. ದರೋಡೆ ಪ್ರಕರಣದಲ್ಲಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದರೂ, ಮಣಿಪಾಲ-ಉಡುಪಿ ಮಧ್ಯೆ ಹಲವು ವಾಹನಗಳಿಗೆ ಡಿಕ್ಕಿಯಾಗಿಸಿ ರಾತ್ರಿ ವೇಳೆ ಪರಾರಿಯಾಗಿದ್ದ.
ಆನಂತರ ಉಡುಪಿ ಪೊಲೀಸರು ಆತನ ಪ್ರೇಯಸಿಯನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದರು. ಆದರೆ, ಇಸಾಕ್ ಮಾತ್ರ ಪೊಲೀಸ್ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಆತ ಉಡುಪಿಯಲ್ಲೇ ಇರುವ ಬಗ್ಗೆ ಮಾಹಿತಿಯಿತ್ತು. ಇಂದು ಕಾರ್ಯಾಚರಣೆ ನಡೆಸಿದ ಹಿರಿಯಡ್ಕದಲ್ಲಿ ಪೊಲೀಸರು ಶೂಟೌಟ್ ಮಾಡಿ ಬಂಧನ ಮಾಡಿದ್ದಾರೆ.
ಬೆಂಗಳೂರಿನ ನೆಲಮಂಗಲ ಠಾಣೆ ವ್ಯಾಪ್ತಿಯಲ್ಲಿ ಪುತ್ತೂರು ಮೂಲದ ಉದ್ಯಮಿಯನ್ನು ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು. ಗರುಡ ಗ್ಯಾಂಗ್ ಸದಸ್ಯರು ಕೃತ್ಯ ನಡೆಸಿರುವ ಮಾಹಿತಿ ಮೇರೆಗೆ ಪೊಲೀಸರು ಇಸಾಕ್ ಬೆನ್ನು ಹತ್ತಿದ್ದರು. ಮಣಿಪಾಲ ಠಾಣೆಯಲ್ಲಿ ಇಸಾಕ್ ಮತ್ತು ಆತನ ಪ್ರೇಯಸಿ ವಿರುದ್ಧ ಕೊಲೆಯತ್ನ ಹಾಗೂ ಆರ್ಮ್ಸ್ ಆಕ್ಟ್‌ನಡಿ ಕೇಸು ದಾಖಲಿಸಲಾಗಿತ್ತು.