ಅಕಾಲಿಕ ಮೃತ್ಯುವಿಗೆ ಜೀನ್ಸ್ ಅಲ್ಲ ಜೀವನಶೈಲಿಯೇ ಕಾರಣ- ಅಧ್ಯಯನ ವರದಿಯಲ್ಲಿ ಆಘಾತಕಾರಿ ಅಂಶ
Thursday, March 13, 2025
ನವದೆಹಲಿ: ಆಧುನಿಕ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿ ಹಾಗೂ ವಿವಿಧ ಅಂಶಗಳಿಂದ ಮಾನವನ ಆರೋಗ್ಯಕ್ಕೆ ಅನೇಕ ಅಪಾಯಗಳು ಎದುರಾಗುತ್ತಿವೆ. ಸ್ವಲ್ಪ ನಿರ್ಲಕ್ಷ್ಯವೂ ಕೂಡ ನಮ್ಮನ್ನು ಆನಾರೋಗ್ಯಕ್ಕೆ ತಳ್ಳುತ್ತದೆ. ನಮ್ಮ ಜೀನ್ಸ್(ವಂಶವಾಹಿ)ಗಿಂತ ಜೀವನಶೈಲಿಯೇ (ಮದ್ಯಪಾನ, ಸಿಗರೇಟ್ ಸೇವನೆ ಮತ್ತು ದೈಹಿಕ ಚಟುವಟಿಕೆ) ಅನಾರೋಗ್ಯಕ್ಕೆ ಮತ್ತು ಅಕಾಲಿಕ ಮರಣಕ್ಕೆ ಬಹುದೊಡ್ಡ ಮಾರಕವಾಗಬಹುದು ಎಂದು ಅಧ್ಯಯನದ ವರದಿಯೊಂದು ಅಘಾತಕಾರಿ ಅಂಶ ಬಹಿರಂಗಗೊಳಿಸಿದೆ
ಅಧ್ಯಯನದಲ್ಲಿ ಸುಮಾರು 5ಲಕ್ಷ ಯುಕೆ ಬಾಯೋಬ್ಯಾಂಕ್ (ಯುಕೆ ಪೀಪಲ್ಸ್) ಭಾಗವಹಸಿದವರ ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ವಯಸ್ಸಾಗುವಿಕೆ, ರೋಗ ಮತ್ತು ಅಕಾಲಿಕ ಮರಣದ ಮೇಲೆ ಪ್ರಭಾವ ಬೀರುವ 22 ಪ್ರಮುಖ ಕಾಯಿಲೆಗಳಿಗೆ 164 ಪರಿಸರ ಅಂಶಗಳ ಪರಿಣಾಗಳೇ ಕಾರಣವಾಗಿವೆ ಅಲ್ಲದೆ, ಆನುವಂಶಿಕ ಅಪಾಯದ ಅಂಶಗಳನ್ನು ಲೆಕ್ಕ ಹಾಕಲಾಗಿದೆ.
ಅಧ್ಯಯನ ಏನು ಹೇಳುತ್ತದೆ..?
ನೇಚರ್ ಮೇಡಿಷನ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಪರಿಸರ ಅಂಶಗಳು ಸಾವಿನ ಅಪಾಯದಲ್ಲಿನ ವ್ಯತ್ಯಾಸದ 17% ರಷ್ಟಿದ್ದರೆ, ತಳಿಶಾಸ್ತ್ರವು(ಆನುವಂಶಿಯ ಅಧ್ಯಯನ) 2% ಕ್ಕಿಂತ ಕಡಿಮೆಯಿದೆ. ಗುರುತಿಸಲಾದ 25 ಪರಿಸರ ಅಂಶಗಳಲ್ಲಿ ಧೂಮಪಾನ, ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಹಾಗೂ ದೈಹಿಕ ಚಟುವಟಿಕೆ ಮತ್ತು ಜೀವನ ಪರಿಸ್ಥಿತಿಗಳು ಮರಣ ಮತ್ತು ವೃದ್ಧಾಪ್ಯಕ್ಕೆ ಹೆಚ್ಚಿನ ಪರಿಣಾಮ ಬೀರುತ್ತವೆ.
ಧೂಮಪಾನವು 21ಕ್ಕಿಂತಲೂ ಅಧಿಕ ರೋಗಗಳ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ ಎಂದು ಅಧ್ಯಯನವು ಹೇಳಿದೆ. ಮನೆಯ ಖರ್ಚು, ನಿರುದ್ಯೋಗದಂತಹ ಸಾಮಾಜಿಕ-ಆರ್ಥಿಕ ಅಂಶಗಳು 19 ರೋಗಗಳ ಅಪಾಯವನ್ನು ಉಂಟುಮಾಡಬಹುದು ಮತ್ತು ದೈಹಿಕ ಚಟುವಟಿಕೆಯ ಕೊರತೆಯು 17 ರೋಗಗಳಿಗೆ ಕಾರಣವಾಗಬಹುದು ಎಂದು ಅಧ್ಯಯನ ಬಹಿರಂಗಗೊಳಿಸಿದೆ.
ಆರೋಗ್ಯಕ್ಕೂ ಅಪಾಯವಿದೆ, ಹೇಗೆ?
ಜನನದ ಬಳಿಕ ಮೊದಲು 10 ವರ್ಷಗಳ ಕಾಲ ದೇಹದ ತೂಕ ಮತ್ತು ಪಾಲಕರ ಧೂಮಪಾನ, ಮದ್ಯಪಾನ ಅಪಾಯಕಾರಿ. ಅಲ್ಲದೆ, ಈ ವಾತಾವರಣದಲ್ಲಿ ಬೆಳೆದರೆ ಮುಂದೆ ನಿಮಗೆ 30-80 ವಯಸ್ಸಿದ್ದರೆ ನೀವು ಅಕಾಲಿಕ ಮರಣಕ್ಕೆ ತುತ್ತಾಗುವ ಸಂಭವ ಜಾಸ್ತಿಯಿದೆ. ಇನ್ನು ಪರಿಸರಕ್ಕೆ ಸಂಬಂಪಟ್ಟಂತೆ(ವಾತಾವರಣಕ್ಕೆ ಹೊಂದಿಕೊಳ್ಳದಿದ್ದರೆ) ಶ್ವಾಸಕೋಶ, ಹೃದಯ ಮತ್ತು ಯಕೃತ್ತಿ(ಲಿವರ್)ಗಳ ಕಾಯಿಲೆಗೆ ಪರಿಣಾಮ ಬೀರುತ್ತದೆ. ಮೆದುಳಿನ ಕಾಯಿಲೆ ಮತ್ತು ಸ್ತನ ಕ್ಯಾನ್ಸರ್ ಆನುವಂಶಿಕ ಕಾಯಿಲೆಗಳಾಗಿವೆ ಎಂದು ಅಧ್ಯನದ ವರದಿ ಹೇಳಿದೆ.
ತಜ್ಞರು ಹೇಳೊದೇನು..?
ಗುರುತಿಸಲಾದ ಅನೇಕ ವೈಯಕ್ತಿಕ ಅಪಾಯಗಳು ಅಕಾಲಿಕ ಮರಣದಲ್ಲಿ ಸಣ್ಣ ಪಾತ್ರವನ್ನು ವಹಿಸಿವೆ ಎಂದು ಸಂಶೋಧನೆ ತೋರಿಸುತ್ತದೆ. ಆದರೆ, ಅದು ಜೀವನದ ಮೇಲೆ ಹಲವು ವಿಧಗಳಲ್ಲಿ ಪ್ರಭಾವ ಬೀರಿತು ಎಂಬುವುದು ಈ ಅಧ್ಯಯನದ ಸಂಶೋಧನೆಗಳು ತಿಳಿಸುತ್ತದೆ. ಅಲ್ಲದೆ, ಅಕಾಲಿಕ ಮರಣ ಮತ್ತು ವಯಸ್ಸಿಗೆ ಸಂಬಂಧಿಸಿದ ಅನೇಕ ಸಾಮಾನ್ಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಪರಿಸರ ಅಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಪ್ಪಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಆಕ್ಸ್‌ಫರ್ಡ್ ಪಾಪ್ಯುಲೇಷನ್ ಹೆಲ್ತ್‌ನ ಸೇಂಟ್ ಕ್ರಾಸ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಪ್ರಾಧ್ಯಾಪಕಿ ಮತ್ತು ಪ್ರಬಂಧದ ಹಿರಿಯ ಲೇಖಕಿ ಕಾರ್ನೆಲಿಯಾ ವ್ಯಾನ್ ಡುಯಿಜ್ ಹೇಳಿದ್ದಾರೆ.