-->

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ





ಖಾಸಗಿ ಚಿಂತನೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯಾಗುತ್ತಿದೆ ಎಂದು ಕುಷ್ಮಾದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು.


ಆಳ್ವಾಸ್‌ನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ವತಿಯಿಂದ ಕುಷ್ಮಾ ಜಿಲ್ಲಾವಾರು ಸಮಿತಿಯ ಸಂಯೋಜಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ರಾಜ್ಯದಲ್ಲಿ ಶೇಕಡಾ 50ರಷ್ಟು ಮಕ್ಕಳು ಖಾಸಗಿ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸರಕಾರಿ ಸಂಸ್ಥೆಗಳಿಗೆ ಹೋಲಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಉತ್ತಮವಾಗಿದೆ. ಕಳೆದ ಬಾರಿಯ ಬೋರ್ಡ್ ಪರೀಕ್ಷೆಯಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು 75 ಶೇಕಡಾ ಫಲಿತಾಂಶ ದಾಖಲಿಸಿದರೆ, ಅನುದಾನಿತ ಸಂಸ್ಥೆಗಳಲ್ಲಿ 79 ಶೇಕಡಾ ಫಲಿತಾಂಶ ಲಭಿಸಿದರೆ ಹಾಗೂ ಖಾಸಗಿ ಸಂಸ್ಥೆಗಳು 90.46 ಶೇಕಡಾ ಫಲಿತಾಂಶ ನೀಡಿವೆ. ಇವುಗಳ ಜೊತೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದಲ್ಲೂ ಖಾಸಗಿ ಸಂಸ್ಥೆಗಳು ಅಗ್ರಗಣ್ಯ ಸ್ಥಾನದಲ್ಲಿ ನಿಂತಿವೆ. ಇದು ರಾಜ್ಯದ ಒಟ್ಟು ಫಲಿತಾಂಶದ ಉನ್ನತಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. ದೇಶದ ಆರ್ಥಿಕತೆಗೆ ದೊಡ್ಡ ಪ್ರಮಾಣದ ಕೊಡುಗೆ ನಮ್ಮ ಕ್ಷೇತ್ರದಿಂದ ಹೋಗುತ್ತಿದೆ. ಇಷ್ಟೆಲ್ಲಾ ಕೊಡುಗೆ ನೀಡುವ ಖಾಸಗಿ ಕ್ಷೇತ್ರವನ್ನು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾನೂನು ಕಟ್ಟಲೆ ಮಾಡುವ ಸಂಧರ್ಭದಲ್ಲಿ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುವ ಚಿಕ್ಕ ಪ್ರಯತ್ನವು ಮಾಡುತ್ತಿಲ್ಲ. ಇದು ಸಲ್ಲದು. ಆ ನೆಲೆಯಲ್ಲಿ ನಮ್ಮ ಬೇಡಿಕೆಗಳು ಆಳುವ ಸರಕಾರಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ( ಕುಪ್ಮಾ)ವನ್ನು 2022ರಲ್ಲಿ ಸ್ಥಾಪಿಸಲಾಯಿತು.


ಖಾಸಗಿ ಕ್ಷೇತ್ರದಲ್ಲಿ ಶಿಕ್ಷಣವನ್ನು ನೀಡುತ್ತಿರುವ ನಮಗೆ ಹತ್ತು ಹಲವು ತೊಡಕುಗಳು ನಮ್ಮ ಮುಂದಿವೆ. ಈ ಎಲ್ಲಾ ಸಮಸ್ಯೆಯನ್ನು ಈ ವೇದಿಕೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ನಾವೆಂದು ಸರಕಾರದೊಂದಿಗೆ ಸಂಘರ್ಷಕ್ಕೆ ಹೋಗುವವರಲ್ಲ. ಆದರೆ ಸಮಸ್ಯೆಗಳ ಪರಿಹಾರದಿಂದ ಈ ಕ್ಷೇತ್ರದಿಂದ

ಇನ್ನು ಹೆಚ್ಚಿನ ಕೊಡುಗೆಯನ್ನು ನಿರೀಕ್ಷಿಸಬಹುದು ಎಂದರು.


ರಾಜ್ಯದಲ್ಲಿ 3655 ಖಾಸಗಿ ಪಿಯು ಕಾಲೇಜುಗಳಿದ್ದು, ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಕುಪ್ಮಾ ಜಿಲ್ಲಾ ಕಾರ್ಯಕಾರಣಿ ಸಮಿತಿ ಸ್ಥಾಪನೆಯಾಗಬೇಕಿದೆ. ನಮ್ಮ ರಾಜ್ಯದಲ್ಲಿದ ಮಠ ಮಾನ್ಯಗಳ, ವಿವಿಧ ಮತಗಳ, ರಾಜಕೀಯ ಮುಖಂಡರ ಶಿಕ್ಷಣ ಸಂಸ್ಥೆಗಳು ನಮ್ಮೊಡನೆ ಕೈ ಜೋಡಿಸಬೇಕಿದೆ. ನಾವೆಲ್ಲರೂ ಸಾಮೂಹಿಕವಾಗಿ ಒಂಡೆದೆ ಸೇರಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಿದೆ.


ಕುಪ್ಮಾದ ರಾಜ್ಯ ಕಾರ್ಯದರ್ಶಿ ಪ್ರೋ ನರೇಂದ್ರ ಎಲ್ ನಾಯಕ್ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆಗೆ ರಾಜ್ಯ ಸಮಿತಿಯ ಸಂಪೂರ್ಣ ಸಹಕಾರವಿರಲಿದ್ದು, ಪ್ರತೀ ಜಿಲ್ಲೆಯಲ್ಲೂ ಕಮಿಟಿ ಸ್ಥಾಪನೆಯಾಗಲೂ ಎಲ್ಲರ ಸಹಕಾರ ಅಗತ್ಯ. ಕುಪ್ಮಾದ ಮೂಲಕ ಸದಸ್ಯ ಸಂಸ್ಥೆಗಳ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗೆ ನಾವು ಸದಾ ಬದ್ದ ಎಂದರು.


ಕುಷ್ಮಾ ಉಪಾಧ್ಯಕ್ಷ ಪ್ರೊ. ಸುಧಾಕರ ಶೆಟ್ಟಿ ಕುಷ್ಮಾ ಜಿಲ್ಲಾವಾರು ಸಮಿತಿ ರಚನೆಯ ಬಗ್ಗೆ ಸಂವಾದ ನಡೆಸಿ ಕೊಟ್ಟರು. ಪ್ರತಿ ಜಿಲ್ಲೆಗಳಲ್ಲಿ ಕುಪ್ಮಾ ಕಾರ್ಯಕಾರಿ ಸಮಿತಿ ಸ್ಥಾಪನೆಯ ಜವಾಬ್ದಾರಿಯನ್ನು ಹಂಚಲಾಯಿತು. ಕುಷ್ಮಾ ಜೊತೆ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ ಕುಷ್ಮಾ ಜಿಲ್ಲಾ ಸಮಿತಿಯ ಸದಸ್ಯರೊಂದಿಗೆ ಪ್ರಶ್ನೋತ್ತರ ಮಾಲಿಕೆ ನಡೆಸಿಕೊಟ್ಟರು.


ಕುಪ್ಮಾದ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಹೊರತರುವ ನಿರ್ಧಾರ ಕೈಗೊಳ್ಳಲಾಯಿತು. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಬೆಂಗಳೂರು ಉತ್ತರ ಕುಷ್ಮಾ ಕಾರ್ಯದರ್ಶಿ ಡಾ ಬಿ. ಕೆ. ದೇವರಾಜ್, ಬೆಂಗಳೂರು ದಕ್ಷಿಣ ಜಿಲ್ಲೆಯ ಕುಷ್ಮಾ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ, ಕುಪ್ಮಾ ಗೌರವಾಧ್ಯಕ್ಷ ರಾಧಾಕೃಷ್ಣ ಶೆಣೈ ಇದ್ದರು. ಕರುಣಾಕರ್ ಬಳ್ಕೂರು ಕಾರ್ಯಕ್ರಮ ನಿರ್ವಹಿಸಿದರು. 

Ads on article

Advertise in articles 1

advertising articles 2

Advertise under the article