ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಗೆ ಅತ್ತೆಯಿಂದಲೇ ಸ್ಕೆಚ್- ಪತ್ನಿ ಸಾಥ್
Wednesday, March 26, 2025
ಬೆಂಗಳೂರು: ಸೋಲದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪತ್ನಿ ಮತ್ತು ಅತ್ತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಾಣವಾರದ ಕೆರೆಗುಡ್ಡದಹಳ್ಳಿ ನಿವಾಸಿಗಳಾದ ಲೋಕನಾಥ್ ಸಿಂಗ್ ಪತ್ನಿ ಯಶಸ್ವಿನಿ(19) ಮತ್ತು ಅತ್ತೆ ಹೇಮಾ(37) ಬಂಧಿತ ಆರೋಪಿಗಳು.
ಆರೋಪಿತೆಯರಾದ ಯಶಸ್ವಿನಿ ಹಾಗೂ ಹೇಮಾ ಮಾ.22ರಂದು ಸೋಲದೇವನಹಳ್ಳಿಯ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನಲ್ಲಿ ಲೋಕನಾಥ್ ಸಿಂಗ್‌ನನ್ನು ಕರೆಸಿ ಚಾಕುವಿನಲ್ಲಿ ಇರಿದು ಕೊಲೆಗೈದಿದ್ದಾರೆ.
ಮಾಗಡಿ ತಾಲೂಕು ಕುದೂರು ಮೂಲದ ಲೋಕನಾಥ್ ಸಿಂಗ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಜೊತೆಗೆಶಾಸಕ ಬಾಲಕೃಷ್ಣ ಅವದ ಆಪ್ತವಲಯದಲ್ಲೂ ಗುರುತಿಸಿದ್ದರು. ಈತನ ವಿರುದ್ಧ ಸಿಸಿಬಿ ಹಾಗೂ ನಗರದ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿತ್ತು.
ವರ್ಷಗಳ ಹಿಂದೆ ಲೋಕನಾಥ್ ಸಿಂಗ್ ಸಹೋದರನ ಮದುವೆಯಾಗಿತ್ತು. ಈ ಸಂದರ್ಭ ಹೇಮಾರನ್ನು ಪರಿಚಯಿಸಿದ ಸಂಬಂಧಿಕರೋರ್ವರು ಹೇಮಾರನ್ನು ಪರಿಚಯಿಸಿ ಸಂಬಂಧದಲ್ಲಿ ನಿನಗೆ ಅತ್ತೆ ಆಗಬೇಕೆಂದು ಲೋಕನಾಥ್‌ಗೆ ಹೇಳಿದ್ದರು. ಅದೇ ವೇಳೆ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಹೇಮಾ ಪುತ್ರಿ ಯಶಸ್ವಿನಿಯೂ ಪರಿಚಯವಾಗಿದ್ದಾಳೆ. ಕೆಲ ದಿನಗಳ ಬಳಿಕ ಇಬ್ಬರು ಮೊಬೈಲ್ ನಂಬರ್ ಬದಲಿಸಿಕೊಂಡು, ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಯಶಸ್ವಿನಿಯನ್ನು ಕುಣಿಗಲ್‌ನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು ಲೋಕನಾಥ್ ಸಿಂಗ್ ಮದುವೆಯಾಗಿದ್ದಾನೆ. ಒಂದೆರಡು ದಿನಗಳ ಕಾಲ ಸಂಸಾರ ಕೂಡ ಮಾಡಿದ್ದಾನೆ. ಈ ಮದುವೆಯ ಬಗ್ಗೆ ಇಬ್ಬರೂ ಮನೆಯವರಿಂದ ಮುಚ್ಚಿಟ್ಟಿದ್ದರು ಎಂದು ಪೊಲೀಸರು ಹೇಳಿದರು.
ದಿನಗಳ ಹಿಂದಷ್ಟೇ ಯಶಸ್ವಿನಿ ಪೋಷಕರ ಬಳಿ ಬಂದಿದ್ದ ಲೋಕನಾಥ್ ಸಿಂಗ್, ಈಗಾಗಲೇ ಯಶಸ್ವಿನಿಯನ್ನು ಮದುವೆಯಾಗಿದ್ದೇನೆ. ಅದ್ಧೂರಿಯಾಗಿ ಮದುವೆ ಮಾಡಿ ಕೊಡುವಂತೆ ದುಂಬಾಲು ಬಿದ್ದಿದ್ದಾನೆ. ಆದರೆ, ಯಶಸ್ವಿನಿಯ ತಂದೆ ಕೃಷ್ಣಸಿಂಗ್ ಕೂಡ ಉದ್ಯಮಿಯಾಗಿದ್ದರಿಂದ, ಲೋಕನಾಥ್ ಸಿಂಗ್ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲದೆ, ಲೋಕನಾಥ್ ಮತ್ತು ಯಶಸ್ವಿನಿ ನಡುವೆ 16 ವರ್ಷಗಳ ಅಂತರವಿದೆ. ಆದ್ದರಿಂದಮದುವೆ ಮಾಡಲು ಸಾಧ್ಯವಿಲ್ಲ ಎಂದಿದ್ದರು.
ಮತ್ತೊಂದೆಡೆ ಯಶಸ್ವಿನಿಗೆ ಪತಿ ಲೋಕನಾಥ್‌ನ ಕೆಲ ಅಕ್ರಮ ವ್ಯವಹಾರ, ಅಕ್ರಮ ಸಂಬಂಧಗಳ ಬಗ್ಗೆ ತಿಳಿದು ಅನುಮಾನ ಮೂಡಿತ್ತು. ಈ ಬಗ್ಗೆ ಪ್ರಶ್ನಿಸಿದ್ದಳು. ಆಗ ಲೋಕನಾಥ್ ಪತ್ನಿಯ ತಂದೆಯ ವಿರುದ್ಧವೇ ಠಾಣೆಯೊಂದರಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದ. ಇದರಿಂದ ಕೋಪಗೊಂಡಿದ್ದ ಹೇಮಾ ಮತ್ತು ಯಶಸ್ವಿನಿ ಹ*ತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ಮಾ.23ರಂದು ಬೆಳಗ್ಗೆ ಯಶಸ್ವಿನಿಯು ಪತಿ ಲೋಕನಾಥ್ ಸಿಂಗ್‌ಗೆ ಕರೆ ಮಾಡಿ ಬರುವಂತೆ ಹೇಳಿದ್ದಾಳೆ. ಅದರಂತೆ ತನ್ನ ಕಾರಿನಲ್ಲಿ ಬಂದ ಲೋಕನಾಥ್ ಚಿಕ್ಕಬಾಣವಾರದಲ್ಲಿ ಪತ್ನಿಯನ್ನು ಹತ್ತಿಸಿಕೊಂಡಿದ್ದಾನೆ. ಬಳಿಕ ಪತ್ನಿ ಸೂಚನೆಯಂತೆ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಮನೆಯಿಂದಲೇ ಸಿದ್ದಪಡಿಸಿಕೊಂಡು ಬಂದಿದ್ದ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದ ಯಶಸ್ವಿನಿ, ಪತಿಗೆ ಊಟ ಮಾಡಿಸಿದ್ದಾಳೆ. ಬಳಿಕ ನಿದ್ದೆ ಮಂಪರಿನಲ್ಲಿದ್ದ ಲೋಕನಾಥ್ ಸಿಂಗ್‌ಗೆ ತಾಯಿ-ಮಗಳು ಇರಿದು ಹತ್ಯೆ ಮಾಡಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಹೇಮಾ, ಪುತ್ರಿಯನ್ನು ಕಾರಿನಲ್ಲಿ ಕಳುಹಿಸಿ ಹಿಂದಿನಿಂದ ಆಟೋದಲ್ಲಿ ಹಿಂಬಾಲಿಸಿದ್ದಳು. ಬಿಜಿಎಸ್ ಲೇಔಟ್‌ನಲ್ಲಿ ಕಾರು ನಿಲ್ಲಿಸಿಕೊಂಡು ಪುತ್ರಿ ಜತೆ ಮಾತನಾಡುತ್ತಿದ್ದ ಲೋಕನಾಥ್ ಸಿಂಗ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾಳೆ. ಯಶಸ್ವಿನಿ ಕೂಡ ಚಾಕುವಿನಿಂದ ಇರಿದಿದ್ದಾಳೆ. ಆಗ ಇಬ್ಬರನ್ನು ತಳ್ಳಿ ಸುಮಾರು ದೂರ ಓಡಿ ಪ್ರಾಣ ರಕ್ಷಣೆಗಾಗಿ ಆಟೋ ಹತ್ತಿದ್ದ ಲೋಕ ನಾಥ್ ಸಿಂಗ್ ಕೆಲ ಕ್ಷಣಗಳಲ್ಲೇ ಮೃ*ತಪಟ್ಟಿದ್ದ ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಪ್ರಕರಣದ ಆರಂಭದಲ್ಲಿ ಹಣಕಾಸಿನ ವಿಚಾರ ಎಂದು ಶಂಕಿಸಲಾಗಿತ್ತು. ಆದರೆ, ಮೊಬೈಲ್ ನೆಟ್‌ವರ್ಕ್ ಹಾಗೂ ಲೋಕನಾಥ್ ಸಿಂಗ್‌ನ ಗನ್‌ಮ್ಯಾನ್‌ನ ಹೇಳಿಕೆಯಲ್ಲಿ ಕೆಲವೊಂದು ಮಾಹಿತಿಗಳು ದೊರಕಿತ್ತು. ಅದನ್ನು ಆಧರಿಸಿ ಪರಿಶೀಲಿಸಿದಾಗ ಪತ್ನಿ ಯಶಸ್ವಿನಿ ಮೇಲೆ ಅನುಮಾನ ಹೆಚ್ಚಾಗಿದ್ದು, ಚಿಕ್ಕಬಾಣವಾರದಲ್ಲಿ ಯಶಸ್ವಿನಿ ಪತಿಯ ಕಾರು ಹತ್ತಿರುವ ದೃಶ್ಯ ಕೂಡ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಆಕೆಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು, ತಾಯಿ-ಮಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.