ಬಡ್ತಿ ಸಿಕ್ಕಿಲ್ಲವೆಂದು ಆಪ್ತಗೆಳತಿಯ ಕುಡಿಯುವ ನೀರಿಗೇ ವಿಷವಿಕ್ಕಿದ ಮಹಿಳೆ
Tuesday, March 11, 2025
ನವದೆಹಲಿ: ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತೊಬ್ಬರ ಏಳಿಗೆ ಸಹಿಸದೆ ಸುಖಾಸುಮ್ಮನೆ ವಿಷಕಾರುವವರು ಇದ್ದೇ ಇರುತ್ತಾರೆ. ವೈಯಕ್ತಿಕವಾಗಿ ನಮಗೂ ಅನೇಕ ಬಾರಿ ಅದರ ಅನುಭವ ಆಗಿರುತ್ತದೆ. ಇದೀಗ ಸಹೋದ್ಯೋಗಿಗೆ ಬಡ್ತಿ ಸಿಕ್ಕಿದ್ದನ್ನು ಸಹಿಸಲಾರದೆ ಮಹಿಳೆಯೊಬ್ಬರು ಕುಡಿಯುವ ನೀರಿಗೆ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದಾಳೆ. ಈ ವಿಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಘಟನೆಯು ಬ್ರೆಜಿಲ್‌ನ ಗೋಯಾಸ್ ನಗರದಲ್ಲಿ ನಡೆದಿದೆ.
ಮಹಿಳೆಯು ತನ್ನ ಸಹೋದ್ಯೋಗಿ ಕುಡಿಯುತ್ತಿರುವ ನೀರಿಗೆ ವಿಷ ಬೆರೆಸುತ್ತಿರುವುದು ಕಂಪೆನಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ (Video Viral) ಆಗಿದ್ದು, ಮಹಿಳೆಗೆ 6 ರಿಂದ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆರೋಪಿ ಮಹಿಳೆ ಮತ್ತು ಆಕೆಯ ಸಹೋದ್ಯೋಗಿ ಆತ್ಮೀಯ ಸ್ನೇಹಿತೆಯರಾಗಿದ್ದಾರೆ. ಇಬ್ಬರ ಪೈಕಿ ಕಂಪೆನಿಯ ಮುಖ್ಯಸ್ಥರು ಬಡ್ತಿ ನೀಡಿ ಈ ವಿಚಾರವನ್ನು ಕಂಪೆನಿಯಲ್ಲಿ ಘೋಷಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿತೆಯು ಸಂತ್ರಸ್ತೆ ಕುಡಿಯುವ ನೀರಿಗೆ ವಿಷವನ್ನು ಬೆರೆಸಿದ್ದು, ಸಿಸಿಟಿವಿಯಲ್ಲಿ ಸಂಪೂರ್ಣ ಕೃತ್ಯವು ಸೆರೆಯಾಗಿದೆ. ಸಂತ್ರಸ್ತ ಮಹಿಳೆ ನೀರನ್ನು ಕುಡಿದ ಕೆಲಕ್ಷಣದ ಬಳಿಕ ಆಕೆಗೆ ಬಾಯಿ ಉರಿಯಲು ಶುರುವಾಗಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಕ್ತ ಚಿಕಿತ್ಸೆಯ ಫಲವಾಗಿ ಮಹಿಳೆಯ ಜೀವ ಉಳಿದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ ಬಳಿಕ ಆರೋಪಿ ಮಹಿಳೆಯನ್ನು ಕೊಲೆ ಯತ್ನ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದು, 6ರಿಂದ 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರದಲ್ಲೇ ಆರೋಪಿತೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.