ಒಂದೇ ಒಂದು ರಾಂಗ್ ಕಾಲ್ ಮಹಿಳೆ ಕಳೆದುಕೊಂಡದ್ದು ಮೂರು ಕೋಟಿಗೂ ಅಧಿಕ ಹಣ- ಎಚ್ಚರವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
Monday, March 31, 2025
ಹೈದರಾಬಾದ್: ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿಯ ಬಿ. ಅಕ್ಷಯ್ ಕುಮಾರ್ ಎಂಬಾತ ರಾಂಗ್ ಕಾಲ್ ಮೂಲಕ ಮಹಿಳೆಯೊಬ್ಬರನ್ನು ಸಂಪರ್ಕಿಸಿದ್ದ. ಈ ಆಕಸ್ಮಿಕ ಕರೆ ಅವರಿಬ್ಬರ ನಡುವೆ ಪರಿಚಯ ಬೆಳೆದು, ನಿಕಟ ಸಂಬಂಧಕ್ಕೂ ತಿರುಗಿತ್ತು. ಆದರೆ, ಅದೇ ರಾಂಗ್ ನಂಬರ್ ಆ ಮಹಿಳೆಯ ಜೀವನದಲ್ಲಿ ಎಂದಿಗೂ ಮರೆಯಲಾಗದ ಘಟನೆಯಾಗಿ ಉಳಿಯುತ್ತದೆಂದು ಆಕೆ ಕನಸಿನಲ್ಲೂ ಭಾವಿಸಿರಲಿಲ್ಲ. ಅಷ್ಟಕ್ಕೂ ಏನಾಯ್ತು ಅನ್ನೋ ಕಂಪ್ಲೇಟ್ ಮಾಹಿತಿ ಇಲ್ಲಿದೆ.
ಅಕ್ಷಯ್, ಕೊರೊನಾ ಸಂದರ್ಭ ಪಶ್ಚಿಮ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರೊಂದಿಗೆ ರಾಂಗ್ ನಂಬರ್ ಮೂಲಕ ಸಂಪರ್ಕಕ್ಕೆ ಬಂದಿದ್ದ. ಮೊದಲು ಆಕೆಗೆ ಆತ ಕರೆ ಮಾಡಿದ್ದ. ಆಕೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ಆಕೆಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದ. ಹೀಗೆ ಇಬ್ಬರ ನಡುವೆ ಪರಿಚಯ ಬೆಳೆಯಿತು. ಆ ಪ್ರಕ್ರಿಯೆಯಲ್ಲಿ, ಆಕೆಯ ಖಾಸಗಿ ವಿವರಗಳನ್ನು ಸಹ ಅಕ್ಷಯ್ ತಿಳಿದುಕೊಂಡಿದ್ದ.
ಖಾಸಗಿ ವಿಚಾರಗಳನ್ನು ಮುಂದಿಟ್ಟು ತನ್ನೊಂದಿಗೆ ಸ್ನೇಹ ಬೆಳೆಸಬೇಕೆಂದು ಮಹಿಳೆಗೆ ಆತ ಬೆದರಿಕೆ ಹಾಕಿದ. ಸ್ನೇಹ ಬೆಳೆಸದಿದ್ದರೆ ಇಲ್ಲದಿದ್ದರೆ, ತನ್ನ ಬಳಿ ಧ್ವನಿ ದಾಖಲೆಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ. ಅಲ್ಲದೆ, ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಆತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ವಿಶಾಖಪಟ್ಟಣ ಪೊಲೀಸರು ತಿಳಿಸಿದ್ದಾರೆ.
ಅಕ್ಷಯ್‌ನಿಂದ ಕಿರುಕುಳ ನಿಲ್ಲದಿದ್ದಾಗ, ಸಂತ್ರಸ್ತೆಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಆರೋಪಿಯ ಮೊಬೈಲ್ ಸಿಗ್ನಲ್ ಆಧರಿಸಿ ತಿರುಪತಿಯಲ್ಲಿ ಆತನನ್ನು ಗುರುತಿಸಿ ಬಂಧಿಸಿದ್ದಾರೆ.
ಆರೋಪಿ ಅಕ್ಷಯ್‌ನಿಂದ 65 ಗ್ರಾಂ ಚಿನ್ನ ಮತ್ತು ಸೆಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಬ್ಯಾಂಕ್‌ನಲ್ಲಿದ್ದ ಸುಮಾರು 2 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಣವನ್ನು ಆತ ಮಹಿಳೆಯನ್ನು ಹೆದರಿಸಿ ಸುಲಿಗೆ ಮಾಡಿದ್ದ ಅನ್ನುವ ವಿಚಾರ ಬೆಳಕಿಗೆ ಬಂದಿದೆ. ತನ್ನ ಖಾಸಗಿ ವಿಚಾರ ಪತಿಗೆ ತಿಳಿಯುತ್ತದೆಂದು ಆಕೆ, ಅಕ್ಷಯ್ ಕೇಳಿದ್ದನ್ನೆಲ್ಲ ಕೊಟ್ಟಿದ್ದಾಳೆ. ಒಂದೇ ಒಂದು ರಾಂಗ್ ಕಾಲ್ ಎಷ್ಟೆಲ್ಲ ಅವಾಂತರ ಸೃಷ್ಟಿಸಿದೆ ನೋಡಿ. ಆದ್ದರಿಂದ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಅನ್ನುವ ಸಂದೇಶವನ್ನು ಈ ರಾಂಗ್ ಕಾಲ್ ಸ್ಟೋರಿ ಹೇಳುತ್ತದೆ.