-->

ತಪಸ್ಯದಿಂದ ಮಂಗಳೂರಿನಲ್ಲಿ  "ಶೌರ್ಯ" ಕಾರ್ಯಕ್ರಮ- ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌: ರೂಪಾ ಅಯ್ಯರ್

ತಪಸ್ಯದಿಂದ ಮಂಗಳೂರಿನಲ್ಲಿ "ಶೌರ್ಯ" ಕಾರ್ಯಕ್ರಮ- ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌: ರೂಪಾ ಅಯ್ಯರ್



ಮಂಗಳೂರು: ವೇದ ಕಾಲದಿಂದಲೂ ಮಹಿಳೆಯರಿಗೆ ಗೌರವ ನೀಡುತ್ತಾ ಬರಲಾಗಿದೆ‌.  ಸ್ತ್ರೀಯಲ್ಲಿ ಕೀರ್ತಿ, ಕ್ಷಮೆಯೇ ನಾನು ಎಂದು ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದಶ ಮಹಾವಿದ್ಯೆಯಲ್ಲಿ ದೇವಿ ತನ್ನ ಶಕ್ತಿ ಬೇಕೇ ಬೇಕು ಎಂದು ತೋರಿಸಿದ್ದಾಳೆ.  ಹಾಗಾಗಿ ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌ ಎಂದು ಖ್ಯಾತ ಅಂಕಣಕಾರ್ತಿ, ಚಿತ್ರ ನಟಿ, ಚಿತ್ರ ನಿರ್ದೇಶಕಿ,  ಸಮಾಜಸೇವಕಿ ರೂಪಾ ಅಯ್ಯರ್ ಹೇಳಿದರು.
ಅವರು ಮಾ.8ರಂದು  ಶನಿವಾರ ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್ 317 , ಐಡಿಎಫ್‌ಸಿ ಫ‌ಸ್ಟ್‌ ಬ್ಯಾಂಕ್‌ ಮತ್ತು ಬಿಎಎನ್‌ಎಂಎಸ್‌ ಮಂಗಳೂರು ತಾಲೂಕು ಸಮಿತಿ ಮಹಿಳಾ ಘಟಕದ ಸಹಯೋಗದಲ್ಲಿ  ತಪಸ್ಯ ಫೌಂಡೇಶನ್ ವತಿಯಿಂದ ಶೌರ್ಯದ ಹೆಸರಲ್ಲಿ ಸಾಹಸಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಸಮಾಜದಲ್ಲಿ ಮಹಿಳೆಯರಿಗೆ ದೌರ್ಜನ್ಯಗಳಾಗುತ್ತಿರುವುದು ಮಾತ್ರವಲ್ಲ,  ದೇವಾನು ದೇವತೆಗಳಿಗೂ ಆಗಿವೆ‌, ಪುರುಷರಿಗೂ ದೌರ್ಜನ್ಯಳಾಗುತ್ತಿದೆ.  ಹೀಗಾಗಿ ನಾವು ಮೇಲು ಕೀಳು ಎಂಬ ಸ್ಪರ್ಧೆಯಲ್ಲಿಯೇ ಹೋದರೆ ದೌರ್ಜನ್ಯಗಳಿಗೆ ಪರಿಹಾರ ಖಂಡಿತಾ ಸಾಧ್ಯವಿಲ್ಲ. ಸಮಾಜದಲ್ಲಿ ಅನೇಕ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಗಳನ್ನು ಮಾಡಿದವರಿದ್ದಾರೆ. ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು.  ಸಮಾಜಕ್ಕಾಗಿ ದುಡಿಯುವವರನ್ನು ನಿರುತ್ಸಾಹಗೊಳಿಸುವವರು ಇದ್ದೇ ಇರುತ್ತಾರೆ. ಇದನ್ನೆಲ್ಲಾ ಲೆಕ್ಕಿಸದೆ ದೇವರೊಬ್ಬನೇ ನನ್ನ ಶಕ್ತಿ ಎಂದು ಅವನನ್ನೇ ಸಾಕ್ಷೀಕರಿಸಿ ಸಾಧನೆ ಮಾಡಿದರೆ ಉತ್ತಮ ಫಲಿತಾಂಶ ಖಂಡಿತಾ ಸಿಗುತ್ತದೆ ಎಂದು ರೂಪಾ ಅಯ್ಯರ್  ಹೇಳಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಲಯನ್ ಜಿಲ್ಲಾ ರಾಜ್ಯಪಾಲರು 317 ಡಿ. ಡಿಸ್ಟ್ರಿಕ್ಟ್ ಗವರ್ನರ್‌ ಲ| ಭಾರತಿ ಬಿ.ಎಂ., ಸ್ತ್ರೀ ತಮ್ಮ ಪರಿಶ್ರಮ, ಕಾಳಜಿ, ತ್ಯಾಗದ ಮೂಲಕ ಇಡೀ ಕುಟುಂಬದ ಭದ್ರತೆಯಾಗಿರುತ್ತಾಳೆ. ಇಂತಹ ಮಹಿಳೆಯರಿಗೆ ವಿಶ್ವ‌ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದರು. ತಪಸ್ಯ ಫೌಂಡೇಶನ್ ಮೂಲಕ ಕ್ಯಾನ್ಸರ್ ರೋಗಿಗಳ ಆರೈಕೆ, ಚಿಕಿತ್ಸೆ ನೀಡಲಾಗುತ್ತಿದೆ. ಇಂತಹಾ ರೋಗಿಗಳ ಸೇವೆ ಮಾಡುವ ಸಂಸ್ಥೆಗೆ ತನು,‌ ಮನ, ಧನಗಳಿಂದ ಸಹಾಯಹಸ್ತ ನೀಡಬೇಕಾಗಿದೆ ಎಂದರು.

ಬಾಲ್ಯದ ಕ್ಯಾನ್ಸರನ್ನು ಗುಣಪಡಿಸಬಹುದು(childhood cancer is curable) ಎಂಬ ಧ್ಯೇಯವಾಕ್ಯವನ್ನಿಟ್ಟು ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ  ಕೇವಲ 23 ದಿನಗಳಲ್ಲಿ ಮುಂಬೈಯಿಂದ ಮಂಗಳೂರಿಗೆ
950 ಕಿ.ಮೀ ಓಡಿ ಬಂದು ವಿಶ್ವದಾಖಲೆ ನಿರ್ಮಿಸಿದ ಗಿರೀಶ್ ಶೆಟ್ಟಿ- ರೇಷ್ಮಾ ಗಿರೀಶ್ ಶೆಟ್ಟಿ ದಂಪತಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.
ರೂಪ ಅಯ್ಯರ್, ಲ| ಭಾರತಿ ಬಿ.ಎಂ., ಡಾ. ಆಶಾ ಜ್ಯೋತಿ ರೈ, ಸಚಿತ ನಂದಗೋಪಾಲ್ ಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಅಪೂರ್ವ ಸಾಧನೆ ಮಾಡುತ್ತಿರುವ ಗಿರೀಶ್ ಶೆಟ್ಟಿ- ರೇಷ್ಮಾ ಗಿರೀಶ್ ಶೆಟ್ಟಿ ದಂಪತಿ, ಕುಮಾರ್ ಅಜ್ವಾನಿ ದಂಪತಿ, ಹರಿದಾಸನ್ ನಾಯರ್ ದಂಪತಿಯನ್ನು ಸನ್ಮಾನಿಸಲಾಯಿತು. 
ಪ್ರಶಾಂತ್ ಶೆಟ್ಟಿ,  ಹರಿಣಿ ಶೆಟ್ಟಿ,  ನಯನ ಶೆಟ್ಟಿ ಹಾಗೂ ಅರವಿಂದ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು.
ವೇದಿಕೆಯಲ್ಲಿ  ಶಾಸಕ ವೇವ್ಯಾಸ ಕಾಮತ್, ಕೆಎಂಸಿ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಹರ್ಷಪ್ರಸಾದ್ ಎಲ್., ಆಸರೆ ಚಾರಿಟೇಬಲ್ ಟ್ರಸ್ಟ್‌ ಚೇರ್‌ಪರ್ಸನ್ ಡಾ. ಆಶಾ ಜ್ಯೋತಿ ರೈ, ಬಾಲ ನ್ಯಾಯ ಮಂಡಳಿಯ ಸಚಿತಾ ನಂದಗೋಪಾಲ್,  ಸವಿತಾ, ನವೀನ್ ಹೆಗ್ಡೆ ಮತ್ತಿತರರಿದ್ದರು.

ಭರತನಾಟ್ಯ ಕಲಾವಿದೆ ಸುನೀತಾ ಶೆಟ್ಟಿ ಗಣೇಶನ ಸ್ಥುತಿ ನೃತ್ಯ ಮಾಡಿದರು. ದಿವ್ಯ ವಸಂತ್ ಶೆಟ್ಟಿ ಪ್ರಾರ್ಥಿಸಿದರು. ತಪಸ್ಯ ಮ್ಯಾನೇಜಿಂಗ್ ಟ್ರಸ್ಟಿ ಸಬಿತಾ ರಮಾನಾಥ್  ಶೆಟ್ಟಿ ಸ್ವಾಗತಿಸಿದರು. ಸ್ವಯಂಪ್ರೇರಿತ ದಾನಿಗಳಿಗೆ ಗೌರವಿಸಲಾಯಿತು.  ಡಾ. ಮಂಜುಳಾ ಶಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಹೆಗ್ಡೆ ವಂದಿಸಿದರು.

*ಶಾಸಕನ ವೇದವ್ಯಾಸ್ 25 ಲಕ್ಷ ಭರವಸೆ:* 
ವೇದಿಕೆ ಮೇಲೆ ಆಸೀನರಾದ ಸಾಧಕರ ಸಾಧನೆ, ತ್ಯಾಗದ ಮುಂದೆ ಶಾಸಕನಾದ ನನ್ನ ಸಾಧನೆ ಏನೂ ಅಲ್ಲ.   ಕ್ಯಾನ್ಸರ್ ಮಕ್ಕಳಿಗಾಗಿ ನಾಲ್ಕು ತಿಂಗಳೊಳಗೆ ದಾನಿಗಳ ಸಹಕಾರದಿಂದ ರೂ. ಇಪ್ಪತ್ತೈದು ಲಕ್ಷ ಕೊಡುವುದಾಗಿ  ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article