ಮಂಗಳೂರು: ಪೊಕ್ಸೊ ಪ್ರಕರಣದ ವಿಚಾರಣಾಧೀನ ಕೈದಿ ಜೈಲಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣು
Sunday, March 16, 2025
ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಪೊಕ್ಸೊ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವಿಚಾರಣಾಧಿನ ಕೈದಿಯೊಬ್ಬನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಅಜಂಕಲ್ಲು ನಿವಾಸಿ ಪ್ರಕಾಶ ಗೋಪಾಲ್ ಮೂಲ್ಯ(43) ಆತ್ಮಹತ್ಯೆಗೆ ಮಾಡಿಕೊಂಡವನು.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾರ್ಚ್ 11ರಂದು ಪ್ರಕಾಶ್ ಗೋಪಾಲ್ ಮೂಲ್ಯ ನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಈತ ಅಂದಿನಿಂದ ಜೈಲು ಪಾಲಾಗಿದ್ದ. ಈತ ರವಿವಾರ ಮುಂಜಾನೆ 4 ರಿಂದ 4.50ರ ಸುಮಾರಿಗೆ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈಲು ಸಿಬ್ಬಂದಿ ತಕ್ಷಣ ಗಮನಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.
ಸ್ಥಳಕ್ಕೆ ಬರ್ಕೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ್ ತನ್ನ ಮನೆಯ ಸಮೀಪದ ಬಾಡಿಗೆ ಮನೆಯಲ್ಲಿದ್ದ ಬಾಲಕಿಗೆ ಕಳೆದ ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಸಂತ್ರಸ್ತೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಸಂತ್ರಸ್ತೆಯ ಹೆತ್ತವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಆತನನ್ನು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಿದ್ದರು.