ಸೇಫಾಗಿ ನಾಸಾದಿಂದ ಭೂಮಿಗಿಳಿದ ಸುನೀತಾ ವಿಲಿಯಮ್ಸ್- ನೌಕೆಯಿಂದ ಹೊರಬಂದ ಗಗನಯಾತ್ರಿ, ಆರೋಗ್ಯ ತಪಾಸಣೆ ಆರಂಭ
ಬರೋಬ್ಬರಿ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಬಾಕಿಯಾಗಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇದೀಗ ಸುರಕ್ಷಿತವಾಗಿ ಭೂಮಿಗೆ ವಾಪಾಸ್ ಆಗಿದ್ದಾರೆ. ಇವರಿದ್ದ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ಸುರಕ್ಷಿತವಾಗಿ ಫ್ಲೋರಿಡಾ ಸಮುದ್ರದಲ್ಲಿ ಲ್ಯಾಂಡ್ ಆಗಿದೆ. ಇದೀಗ ಈ ನೌಕೆಯಿಂದ ಸುನೀತ್ ವಿಲಿಯಮ್ಸ್ ತಂಡ ಹೊರಬಂದಿದೆ.
ಹೌದು...ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಹಾಗೂ ತಂಡ ಸುರಕ್ಷಿತವಾಗಿ ಭೂಮಿಗೆ ಮರಳಿದೆ. ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆ ಲ್ಯಾಂಡ್ ಆಗಿದೆ. ಸಮುದ್ರಕ್ಕಿಳಿದ ನೌಕೆಯನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಸಿಬ್ಬಂದಿಯ ತಂಡ ಹಡಗಿನ ಮೂಲಕ ಮೇಲಕ್ಕೆತ್ತಿದೆ. ಇದೀಗ ಈ ನೌಕೆಯಿಂದ ಸುನೀತಾ ವಿಲಿಯಮ್ಸ್ ಹಾಗೂ ತಂಡ ಹೊರಬಂದಿದೆ. ಗುರುತ್ವಾಕರ್ಷಣೆಯ ಬಲವಿಲ್ಲದೆ ಕಳೆದ 9ತಿಂಗಳಿನಿಂದ ಬಾಹ್ಯಾಕಾಶದಲ್ಲಿಯೇ ಉಳಿದಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್‌ಗೆ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ.
ಭಾರತೀಯ ಕಾಲಮಾನದ ಪ್ರಕಾರ ಬುಧವಾರ ನಸುಕಿನ ಸಮಯ 3.27ಕ್ಕೆ ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್‌ಕ್ರಾಫ್ಟ್ ನೌಕೆ ಇಳಿದಿದೆ. ಈ ನೌಕೆಯಲ್ಲಿ ಒಟ್ಟು ನಾಲ್ವರಿದ್ದರು. ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್. ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆಯ ಹ್ಯಾಚ್ ತೆರೆಯಲಾಗಿದೆ. ಬಳಿಕ ಸಿಬ್ಬಂದಿಯ ತಂಡ ನೌಕೆಯ ಒಳ ಪ್ರವೇಶಿಸಿ ಅಗತ್ಯ ವಸ್ತುಗಳನ್ನು ಹೊರತಂದಿದ್ದಾರೆ. ಬಳಿಕ ನಾಲ್ವರು ಗಗನಯಾತ್ರಿಗಳನ್ನು ನೌಕೆಯಿಂದ ಸುರಕ್ಷಿತವಾಗಿ ಹೊರತರಲಾಗಿದೆ.
ಸುದೀರ್ಘ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣಾ ಬಲವಿಲ್ಲದೆ ಕಳೆದಿರುವ ಕಾರಣ ಗಗನಯಾತ್ರಿಗಳು ಭೂಮಿಗೆ ಬಂದಾಗದಾಗ ಏಕಾಏಕಿ ಗುರುತ್ವಾಕರ್ಷಣಾ ಬಲಕ್ಕೆ ಒಳಪಡುತ್ತಾರೆ. ಹೀಗಾಗಿ ಗಗನಯಾತ್ರಿಗಳಲ್ಲಿ ತಲೆಸುತ್ತು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಗಗನಯಾತ್ರಿಗಳಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ಪ್ರಕ್ರಿಯೆ ಶುರು ಮಾಡಿದೆ.
ಸ್ಟಾರ್‌ಲೈನರ್ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸಬೇಕಾಯಿತು. ಸುದೀರ್ಘ 9 ತಿಂಗಳ ಕಾರ್ಯಾಚರಣೆಯನ್ನು ರೋಮಾಂಚನಕಾರಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದ್ದಾರೆ. 2024ರ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಪ್ರಾಯೋಗಿಕ ನೌಕೆಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಐಎಸ್‌ಎಸ್‌ಗೆ ಹಾರಿದರು. ಕೇವಲ 8 ದಿನಗಳ ಕಾರ್ಯಾಚರಣೆಯ ಅವಧಿಯಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಸುನಿತಾ ಮತ್ತು ಬುಚ್ ಸ್ಟಾರ್‌ಲೈನರ್‌ನಲ್ಲಿ ಹಿಂತಿರುಗಲು ಸಾಧ್ಯವಾಗಲಿಲ್ಲ. ಬೋಯಿಂಗ್ ಮತ್ತು ನಾಸಾ ಇಬ್ಬರೂ ಇಲ್ಲದೆ ನೌಕೆಯನ್ನು ಇಳಿಸಿದರು. ಅಂತಿಮವಾಗಿ ಸುನಿತಾ ಮತ್ತು ಬುಚ್ ಅವರ ಪ್ರಯಾಣವನ್ನು 2025ರ ಮಾರ್ಚ್‌ಗೆ ಮುಂದೂಡಲಾಯಿತು.