ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ವಿಘ್ನೇಶ್ ಪುತ್ತೂರು: ಗೆದ್ದಾಗ ನೆರೆಮನೆಯ ಶರೀಫ್‌ರನ್ನು ಮರೆಯದ ಯುವ ಕ್ರಿಕೆಟಿಗ
Thursday, March 27, 2025
ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಘ್ನೇಶ್ ಪುತ್ತೂರು ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಇದೀಗ ಅವರು ಸೋಷಿಯಲ್ ಮೀಡಿಯಾ ಸ್ಟಾರ್. ಜೊತೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.
ವಿಘ್ನೇಶ್ ಪುತ್ತೂರು ಎಂಬ ಯುವ ಸ್ಪಿನ್ನರ್‌ಗೆ ಈ ಬಾರಿಯ ಐಪಿಎಲ್‌ನಲ್ಲಿ ಆಡಲು ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಮಾರ್ಚ್ 23ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದಲ್ಲಿ ತಾನು ಎಸೆದ 24 ಚೆಂಡುಗಳಲ್ಲಿ 32ರನ್ ಬಿಟ್ಟುಕೊಟ್ಟು ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಹೊಡಿಬಡಿ ದಾಂಡಿಗ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್‌ಗಳನ್ನು ಪತನಗೊಳಿಸಿ ವಿಘ್ನೇಶ್ ಮಿಂಚಿದ್ದರು.
ತನ್ನ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ವಿಘ್ನೇಶ್‌ಗೆ ಮಹೇಂದ್ರಸಿಂಗ್ ದೋನಿ, ಕ್ರೀಡಾಂಗಣದಲ್ಲೇ ಬೆನ್ನುತಟ್ಟಿ ಶಹಭಾಸ್ ಎಂದಿದ್ದರು. ಅಲ್ಲದೆ ವಿಘ್ನೇಶ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಘ್ನೇಶ್ ಪುತ್ತೂರು ಬಗ್ಗೆ ಹೆಚ್ಚಿನ ವಿವರ ಪಡೆಯಲು ಹುಡುಕಾಟ ಆರಂಭವಾಗಿತ್ತು.
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್ ಶೈಲಿಯ ಆಟಗಾರನಾದ ವಿಘ್ನೇಶ್ ಪುತ್ತೂರು ಓರ್ವ ಅಟೋ ಚಾಲಕನ ಪುತ್ರ. ಕೇರಳದ ಮಲಪ್ಪುರಂ ನಿವಾಸಿ ಕೇರಳ ತಂಡದಲ್ಲಿ ರಣಜಿಯನ್ನೂ ಆಡದ ವಿಘ್ನೇಶ್‌ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶದಲ್ಲಿ ಅವರು ಜಗತ್ತಿನ ಗಮನ ಸೆಳೆದಿದ್ದಾರೆ. ಕೇರಳದ ಪ್ರಮುಖ ಮಾಧ್ಯಮಗಳು ವಿಘ್ನೇಶ್ ಅವರ ಅವರ ಸಂದರ್ಶನ ಮಾಡಿದಾಗ ತನ್ನನ್ನು ಕ್ರಿಕೆಟ್‌ಗೆ ಕರೆತಂದದ್ದು, ಪ್ರೋತ್ಸಾಹಿಸಿದ್ದು ನೆರೆಮನೆಯ ಶರೀಫ್ ಎಂದು ಹೇಳಿದ್ದರು. ಮಾಧ್ಯಮಗಳು ಈ ಬಗ್ಗೆ ಶರೀಫ್ ಬಳಿ ಕೇಳಿದಾಗ ಅವರು ಮಾತ್ರ ಅದೇನು ದೊಡ್ಡದಲ್ಲ ಎಂಬ ರೀತಿಯಲ್ಲಿ ಉತ್ತರಿಸಿದ್ದಾರೆ.
ವಿಘ್ನೇಶ್ ಆ ರೀತಿ ಹೇಳಿದ್ದು ಅವರ ವಿನಯತೆಯಿಂದ. ಸಣ್ಣವರಿದ್ದಾಗ ಕ್ರಿಕೆಟ್ ಆಡುತ್ತಿರುವ ಸಂದರ್ಭ ಅವರಲ್ಲಿನ ಪ್ರತಿಭೆ ಕಂಡು ಸ್ವಾಭಾವಿಕವಾಗಿ ನಾವು ಪ್ರೋತ್ಸಾಹಿಸಿದ್ದೇನೆ. ನಾನು ಕ್ರಿಕೆಟ್ ಬಗ್ಗೆ ಒಂದು ಕ್ಯಾಂಪ್‌ನಲ್ಲಿ ಸ್ವಲ್ಪ ವಿಷಯ ಕಲಿತಿದ್ದೆ. ಆ ಸಾಮರ್ಥ್ಯ ವಿಘ್ನೇಶ್‌ನಲ್ಲಿ ಇದ್ದವು. ಅದರಲ್ಲಿಯೂ ಬೌಲಿಂಗ್ ಮಾಡುವಾಗ ಆತನ ಶೈಲಿ ಉತ್ತಮವಾಗಿತ್ತು. ಬಳಿಕ ಆತನ ಪೋಷಕರಲ್ಲಿ ಮಾತಾಡಿ ಕೋಚಿಂಗ್‌ಗೆ ಸೇರಿಸಿದ್ದೆ. ಅಲ್ಲದೆ ಎಡ ಕೈಯಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡುವುದನ್ನು ಹೇಳಿಕೊಟ್ಟಿದ್ದೆ. ಅಲ್ಲದೆ ಆತನನ್ನು ಎರಡು ಮೂರು ವರ್ಷಗಳ ಕಾಲ ನನ್ನ ಬೈಕ್‌ನಲ್ಲಿ ಮೈದಾನಕ್ಕೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾರೆ.
ನಾನು ಆತನನ್ನು ಆಟಗಾರನನ್ನಾಗಿ ಮಾಡಿದಲ್ಲ. ಆತನೇ ಆದದ್ದು. ಕೋಚ್ ಬಳಿ ವಿಘ್ನೇಶ್ ಕಲಿತಿದ್ದಾನೆ. ಈಗ ಉತ್ತಮ ಪ್ರದರ್ಶನ ನೀಡಿದಾಗ ನಮ್ಮನ್ನೆಲ್ಲಾ ನೆನೆದುಕೊಂಡ ಅಷ್ಟೆ ಎಂದಿದ್ದಾರೆ.