ಮಂಗಳೂರು: ಬೇಸಿಗೆಗೊಂದು ಚಾಮರ 2025" ಉಚಿತ ಬೇಸಿಗೆ ಶಿಬಿರ ಉದ್ಘಾಟನೆ
Thursday, April 17, 2025
ಮಂಗಳೂರು: ಚಾಮರ ಫೌಂಡೇಶನ್ (ರಿ.) ಮತ್ತು ಹಿಂದೂ ವಿದ್ಯಾದಾಯಿನಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ "ಬೇಸಿಗೆಗೊಂದು ಚಾಮರ 2025" ಶಿಬಿರದ 5ನೇ ಆವೃತ್ತಿಗೆ ಉದ್ಘಾಟನೆಗೊಂಡಿತು. ಸರಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಆಯೋಜಿಸಲಾದ ಈ ಶಿಬಿರದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ.
ಯಶಸ್ ಶೆಟ್ಟಿ ಹಾಗೂ ಮಮತಾ ವೈ. ಶೆಟ್ಟಿ ಬೇಸಿಗೆ ಶಿಬಿರ ಉದ್ಘಾಟಿಸಿದರು. ಕಿರುತೆರೆ ನಟಿ ಗೌತಮಿ ಜಾಧವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದವರು. ತಮ್ಮ ಸಂವೇದನಾಶೀಲ ಭಾಷಣದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಕನಸುಗಳನ್ನು ಬೆಳೆಸುವ ಪ್ರೇರಣೆಯನ್ನು ನೀಡಿದರು. ಅವರ ಹಾಜರಾತಿ ಮಕ್ಕಳಿಗೆ ಭರವಸೆ ಮತ್ತು ಪ್ರೇರಣೆಯ ಆಶಯವನ್ನು ತುಂಬಿತು.
ಚಾಮರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ರಚನಾ ಅಧ್ಯಕ್ಷತೆ ವಹಿಸಿದರು. ಹಿಂದೂ ವಿದ್ಯಾದಾಯಿನಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಾಲಚಂದ್ರ ಕೆ., ಚಿತ್ರಗ್ರಾಹಕ ಅಭಿಷೇಕ್ ಜಿ. ಕಾಸರಗೋಡು, ಗೋವಿಂದಾಸ್ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಜಿ., ಮತ್ತು ಪ್ರಸಿದ್ಧ ಕಲಾವಿದ ಕರಣ್ ಆಚಾರ್ಯ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.
ಚಾರುಷಿ ಕಾರ್ಯಕ್ರಮ ನಿರೂಪಿಸಿದರು.ಚಾಮರ ಫೌಂಡೇಶನ್‌ನ ಟ್ರಸ್ಟಿ ಮನಿಷ್ ಕೆ. ಸಾಲಿಯನ್ ಸ್ವಾಗತಿಸಿದರು. ರತನ್ ವಂದಿಸಿದರು.
ಕಾರ್ಯಕ್ರಮದ ಬಳಿಕ ಅಭಿಷೇಕ್ ಜಿ. ಕಾಸರಗೋಡು ಅವರು “ಚಲನಚಿತ್ರ ನಿರ್ಮಾಣದ ಮೂಲಭೂತ ಕಲಿಕೆ” ಕುರಿತಂತೆ ಮಕ್ಕಳಿಗೆ ವಿಶಿಷ್ಟ ಕಾರ್ಯಕ್ರಮ ನಡೆಸಿದರು. ಶಿಬಿರ ಎ.18 ರವರೆಗೆ ನಡೆಯಲಿದ್ದು, ಕಲಾ, ನಾಟಕ, ಆಟಗಳು, ವೈಯಕ್ತಿಕತೆ ಹಾಗೂ ಜೀವನ ಕೌಶಲ್ಯ ತರಬೇತಿಗಳನ್ನು ಒಳಗೊಂಡು ಮಕ್ಕಳ ಸೃಜನಾತ್ಮಕತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಉದ್ದೇಶಿತವಾಗಿದೆ. ವಿಭಿನ್ನ ಕ್ಷೇತ್ರಗಳ ಗಣ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.