ಬೆಂಗಳೂರು: ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿ ಮೃತಪಟ್ಟ ಶಿಶುವನ್ನು ತ್ಯಾಜ್ಯದೊಂದಿಗೆ ಎಸೆಯಲು ಕುಮ್ಮಕ್ಕು- ಆರೋಪಿ ಅರೆಸ್ಟ್
Saturday, April 19, 2025
ಬೆಂಗಳೂರು: ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿ ಹೆರಿಗೆಯಾದ ಬಳಿಕ ಮೃತಪಟ್ಟ ನವಜಾತ ಶಿಶುವನ್ನು ಕಸದೊಂದಿಗೆ ತಿಪ್ಪೆಗುಂಡಿಗೆ ಎಸೆದಿದ್ದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಯಲಹಂಕ ನಿವಾಸಿ, ಆಟೋಚಾಲಕ ಭರತ್ (23) ಬಂಧಿತ ಆರೋಪಿ.
ಎರಡು ವರ್ಷಗಳ ಹಿಂದೆ ಭರತ್ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಅಮಲಲ್ಲಿ ಅಪ್ರಾಪ್ತೆಯನ್ನು ಈತ ಗರ್ಭಿಣಿ ಮಾಡಿದ್ದ. 9ತಿಂಗಳ ಬಳಿಕ ಅಕ್ಕಪಕ್ಕದ ಮನೆಯವರೇ ಶಿಶುವನ್ನು ಡೆಲಿವರಿ ಮಾಡಿಸಿದ್ದರು. ಕಳೆದ 10ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಶಿಶು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶು ಮೃತಪಟ್ಟಿದ್ದರಿಂದ ಆರೋಪಿ ಕುಮ್ಮಕ್ಕಿನಿಂದ ಅಪ್ರಾಪ್ತೆಯು ನವಜಾತ ಶಿಶುವನ್ನು ಕಸದ ಬ್ಯಾಗಿನಲ್ಲಿ ತುಂಬಿದ್ದಳು. ಪಕ್ಕದ ಮನೆಯ ವ್ಯಕ್ತಿಗೆ ಕಸ ನೀಡಿ ಅದರ ಮೂಲಕ ಶಿಶುವನ್ನು ಹೊರಹಾಕುವಂತೆ ಸೂಚಿಸಿದ್ದಳು. ಕಸದ ಪ್ಲಾಸ್ಟಿಕ್‌ನಲ್ಲಿ ಮೃತಪಟ್ಟ ಶಿಶು ಇರುವುದನ್ನು ಅರಿಯದ ವ್ಯಕ್ತಿ ಕಸ ತೆಗೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಯ ಬಳಿ ಖಾಲಿ ಜಾಗದಲ್ಲಿ ಹಾಕಿದ್ದ. ಕಸದಲ್ಲಿ ಶಿಶು ಪತ್ತೆಯಾಗುತ್ತಿದ್ದಂತೆ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ವ್ಯಕ್ತಿಯೋರ್ವ ಸೈಕಲ್‌ನಲ್ಲಿ ಬಂದು ಕವರ್‌ನಲ್ಲಿ ಕಸ ಹಾಕಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಆತನನ್ನು ಪತ್ತೆ ಹಚ್ಚಿ ಪ್ರಶ್ನಿಸಿದಾಗ, ಈ ಬಗ್ಗೆ ತನಗೇನೂ ಗೊತ್ತಿಲ್ಲ. ಪಕ್ಕದ ಮನೆಯವರು ಕಸ ಹಾಕುವುದಕ್ಕೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ಅಪ್ರಾಪ್ತಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಪೋಕ್ಸ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದಾರೆ.