ಬೆಳ್ತಂಗಡಿ: ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ರವಾನೆ- ವಾಲಿಬಾಲ್ ತರಬೇತಿದಾರ ಅರೆಸ್ಟ್
Monday, April 28, 2025
ಬೆಳ್ತಂಗಡಿ: ವಾಲಿಬಾಲ್ ತರಬೇತಿದಾರನೊಬ್ಬ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ನಿವಾಸಿ ಸೈಯ್ಯದ್ (24) ಬಂಧಿತ ಆರೋಪಿ. ಈತ ಬೆಳ್ತಂಗಡಿಯ ಖಾಸಗಿ ಕಾಲೇಜಿನ 17ರ ಹರಯದ ವಿದ್ಯಾರ್ಥಿನಿಗೆ ಕೆಲವು ದಿನಗಳಿಂದ ನಿರಂತರ ಅಶ್ಲೀಲ ಮೆಸೇಜ್ ಮಾಡುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಎ.26 ರಂದು ಉಜಿರೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಥಳಿಸಿದ್ದಾರೆ.
ಈ ವೇಳೆ ಆರೋಪಿ ಸೈಯ್ಯದ್‌ನ ಮೊಬೈಲ್ ಪರಿಶೀಲನೆ ನಡೆಸಿದಾಗ ಯುವತಿಯರ ಹಾಗೂ ಆತನ ನೂರಾರು ಅಶ್ಲೀಲ ಫೋಟೋ, ವೀಡಿಯೋಗಳು ಪತ್ತೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮಂಗಳೂರು ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿ ಸೈಯ್ಯದ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ಧ ಹಲ್ಲೆಗೊಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ.