ಮಂಗಳೂರು: ವ್ಯಕ್ತಿಯ ಗುಂಪು ಹತ್ಯೆ ಪ್ರಕರಣ- ಮತ್ತೆ ಐವರು ಅರೆಸ್ಟ್, ಹತ್ಯೆಗೀಡಾದವನ ಗುರುತು ಪತ್ತೆ
Wednesday, April 30, 2025
ಮಂಗಳೂರು: ನಗರದ ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿಯಲ್ಲಿ ರವಿವಾರ ನಡೆದಿರುವ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿದೆ.
ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಹಾಗೂ ಆದರ್ಶ್ ಬಂಧಿತ ಐವರು ಆರೋಪಿಗಳು.
ಕೇರಳ ರಾಜ್ಯ ಮೂಲದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಅಶ್ರಫ್ ಹತ್ಯೆಗೀಡಾದವನು ಎಂದು ಪೊಲೀಸ್ ಕಮಿಷನರ್ ದೃಢಪಡಿಸಿದ್ದಾರೆ. ಮಂಗಳೂರಿನಲ್ಲಿ ಚಿಂದಿ ಆಯ್ದುಕೊಂಡು ಬದುಕುತ್ತಿದ್ದ ಈತ ರಾತ್ರಿ ವೇಳೆ ಅಂಗಡಿಗಳ ಮುಂಭಾಗ ಮಲಗುತ್ತಿದ್ದ ಎಂದು ತಿಳಿದು ಬಂದಿದೆ. ಈತ ಮಾನಸಿಕ ಅಸ್ವಸ್ಥ ಎಂಬ ಮಾಹಿತಿಯೂ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ಬಂಧನ ಆಗಬೇಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.