ಕಸದ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ- ಹೆಣ್ಣು ಶಿಶುವೆಂದು ಎಸೆದರೇ ಪಾಪಿ ಹೆತ್ತವರು
Sunday, April 13, 2025
ಮಂಡ್ಯ: ಇಲ್ಲಿನ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಬಳಿಯಿರುವ ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಶನಿವಾರ ಮುಂಜಾನೆ ಪತ್ತೆಯಾಗಿದೆ.
ಮಗು ಅಳುತ್ತಿರುವುದನ್ನು ಗಮನಿಸಿ ಸ್ಥಳೀಯರು ಕಸದ ತೊಟ್ಟಿ ಬಳಿ ಬಂದಾಗ ನವಜಾತ ಶಿಶು ಪತ್ತೆಯಾಗಿದೆ. ಹೆಣ್ಣುಮಗು ಎಂಬ ಕಾರಣಕ್ಕೆ ಜನಿಸಿದ ದಿನವೇ ಪೋಷಕರು ಕಸದ ತೊಟ್ಟಿಗೆ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.
ತಕ್ಷಣ ಶಿಶುವನ್ನು ರಕ್ಷಿಸಲಾಗಿದೆ. ಸದ್ಯ ಶಿಶುಬಿಗೆ ಮೂರು ದಿನಗಳ ಕಾಲ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಬಳಿಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು ಎಂದು ಸಿಡಿಪಿಒ ಕೃಷ್ಣಮೂರ್ತಿ ತಿಳಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.