ಪ್ರಿಯತಮೆಯ ರಕ್ಷಣೆಗೆ ದೌಢಾಯಿಸಿದ ಯುವಕನನ್ನು ಥಳಿಸಿ ಕೊಂದ ದುಷ್ಕರ್ಮಿಗಳು
Friday, April 25, 2025
ಕೊಲ್ಕತ್ತಾ: ತನ್ನ ಲಿವ್ ಇನ್ ಸಂಗಾತಿಗೆ ಕಿರುಕುಳ ನೀಡುತ್ತಿದ್ದ ಮೂವರು ಗೂಂಡಾಗಳ ವಿರುದ್ಧ ಸಮರ ಸಾರಿದ್ದ ಯುವಕನನ್ನು ಥಳಿಸಿ ಕೊಂದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.
ಸಂಕೇತ್ ಚಟರ್ಜಿ(29) ಮೃತಪಟ್ಟ ಯುವಕ.
ಯುವತಿ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾದ ಬಳಿಕ ತನ್ನ ಲೀವ್ ಇನ್ ಸಂಗಾತಿಯನ್ನು ಬೆದರಿಸುವ ಸಲುವಾಗಿ ಹೊರ ನಡೆದಿದ್ದಳು. ಈ ವೇಳೆ ಮೂವರು ದುಷ್ಕರ್ಮಿಗಳು 23ವರ್ಷದ ಈ ಯುವತಿಗೆ ಕಿರುಕುಳ ನೀಡಲು ಮಂದಾಗಿದ್ದಾರೆ. ಪಾನಮತ್ತ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ ಬಳಿ ಅನುಚಿತವಾಗಿ ನಡೆದುಕೊಳ್ಳಲು ಆರಂಭಿಸಿದ್ದಾನೆ. ಮತ್ತೊಬ್ಬ ಆಕೆಯ ಕೈಹಿಡಿದು ಬೇರೆಡೆಗೆ ಒಯ್ಯಲು ಪ್ರಯತ್ನಿಸಿದ್ದಾನೆ. ಆಕೆಯ ಚೀರಾಟ ಕೇಳಿ ಸಂಕೇತ್ ಚಟರ್ಜಿ ಆಕೆಯ ನೆರವಿಗೆ ಧಾವಿಸಿದ್ದಾನೆ.
ಒಂದು ಸಲಕ್ಕೆ ಆಕೆಯನ್ನು ಬಿಡಿಸುವಲ್ಲಿ ಯಶಸ್ವಿಯಾದರೂ, ಒಬ್ಬ ಸಂಕೇತ್‌ಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಈ ವೇಳೆ ಉಳಿದವರು ಬಿದಿರಿನ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ. ಸಂಕೇತ್ ಚಟರ್ಜಿಯನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿದ್ದಲ್ಲದೇ, ಆತನನ್ನು ರಕ್ಷಿಸುವಂತೆ ಮೊರೆ ಇಟ್ಟ ಪ್ರಿಯತಮೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ಖುದಿರಾಂಪಲ್ಲಿ ಪ್ರದೇಶದಲ್ಲಿ ನೆರವಿಗಾಗಿ ಯುವತಿ ಯಾಚಿಸಿದರೂ ಯಾರೂ ಸಹಾಯಹಸ್ತ ಚಾಚಲಿಲ್ಲ. ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಕೇತ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಳಿಗ್ಗೆ 8ರ ಸುಮಾರಿಗೆ ಆತ ಮೃತಪಟ್ಟ ಎಂದು ಪೊಲೀಸರು ವಿವರಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿಗಳಾದ ಶಂಭು ಮಂಡಲ್, ಸಾಗರ್ ದಾಸ್ ಮತ್ತು ರಾಜು ಘೋಷ್ ಎಂಬುವವರನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.
ಎಸಿ ತಂತ್ರಜ್ಞನಾಗಿರುವ ಸಂಕೇತ್ ಚಟರ್ಜಿ ಗೌರಾಂಗ್ ನಗರದಲ್ಲಿ ಎರಡೂವರೆ ವರ್ಷದಿಂದ ಪ್ರಿಯತಮೆಯೊಂದಿಗೆ ವಾಸವಿದ್ದ. ಇವರ ವಿವಾಹಕ್ಕೆ ಕುಟುಂಬದವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸದ್ಯದಲ್ಲೇ ವಿವಾಹವಾಗಲು ನಿರ್ಧರಿಸಿದ್ದರು ಎಂದು ಸಂಕೇತ್ ನ ಸಹೋದರಿ ವಿವರಿಸಿದ್ದಾರೆ.