ಮಂಗಳೂರು: ತಡರಾತ್ರಿ ಭೀಕರ ಅಪಘಾತ- ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಕೇರಳ ಮೂಲದ ವಿದ್ಯಾರ್ಥಿಗಳಿಬ್ಬರು ಮೃತ್ಯು
Tuesday, April 8, 2025
ಮಂಗಳೂರು: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿವೈಡರ್‌ಗೆ ಬೈಕ್ ಢಿಕ್ಕಿಯಾಗಿ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರಿನ ಶ್ರೀನಿವಾಸ ಕಾಲೇಜಿನ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಸಂಕೀರ್ತನ್(23) ಮತ್ತು ಎ.ಜೆ.ಡೆಂಟಲ್ ಕಾಲೇಜಿನ ವಿದ್ಯಾರ್ಥಿ ಧನುರ್ವೇದ್(19) ಮೃತಪಟ್ಟವರು.
ಇವರು ಕುಂಟಿಕಾನದ ಲೋಹಿತ್ ನಗರದ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಕಾಲೇಜು ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ತಡರಾತ್ರಿ 2.50 ಸುಮಾರಿಗೆ ಸಂಕೀರ್ತನ್, ಧನುರ್ವೇದ್ ಹಾಗೂ ಸಿ.ಬಿ.ಸ್ಯಾಮ್ ಒಂದು ಬೈಕ್‌ನಲ್ಲಿ ಮತ್ತೊಂದು ಬೈಕ್‌ನಲ್ಲಿ ರೋಹನ್ ಜೋಬಿ ಮತ್ತು ಮೇಘನಾಥ್ ಎಂಬವರು ಟೀ ಸೇವನೆಗೆಂದು ಲೋಹಿತ್ ನಗರದಿಂದ ಪಂಪ್ ವೆಲ್ ಕಡೆಗೆ ಹೊತಟಿದ್ದರು.
ಸಂಕೀರ್ತನ್ ಬೈಕ್ ಸವಾರಿ ಮಾಡಿಕೊಂಡಿದ್ದು ಧನುರ್ವೇದ್ ಮಧ್ಯದಲ್ಲಿ ಹಾಗೂ ಸಿಬಿ ಸ್ಯಾಮ್ ಅವರ ಹಿಂಬದಿ ಕುಳಿತುಕೊಂಡು ಸವಾರಿ ಮಾಡುತ್ತಿದ್ದರು. ಬೈಕ್ ಅತಿವೇಗವಾಗಿ ಚಲಾಯಿಸಿಕೊಂಡು ಹೋದ ಪರಿಣಾಮ ಕೆಪಿಟಿ ಬಳಿಯ SKS ಜಂಕ್ಷನ್‌ನ ತೆರೆದ ಡಿವೈಡರ್ ಅಂಚಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಾಕಷ್ಟು ದೂರ ಬಿದ್ದಿದ್ದು, ಮೂವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಬಿದ್ದ ರಭಸಕ್ಕೆ ಸಂಕೀರ್ತನ್ ಹಾಗೂ ಧನುರ್ವೇದ್ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿ ಮೃತಪಟ್ಟಿದ್ದಾರೆ. ಸಿಬಿ ಸ್ಯಾಮ್‌ರವರಿಗೆ ಗದ್ದಕ್ಕೆ ತರಚಿದ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ.