ಭಾವಿ ಪತಿಯ ಕಣ್ಣ ಮುಂದೆಯೇ ರೋಲರ್ ಕೋಸ್ಟರ್‌ನಿಂದ ಬಿದ್ದು ಯುವತಿ ದುರಂತ ಸಾವು
ನವದೆಹಲಿ: ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಭಾವಿ ಪತಿಯ ಕಣ್ಣ ಮುಂದೆಯೇ ರೋಲರ್ ಕೋಸ್ಟರ್‌ನಿಂದ ಬಿದ್ದು 24 ವರ್ಷದ ಯುವತಿ ಅಸು ನೀಗಿರುವ ದುರಂತ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಪ್ರಿಯಾಂಕಾ ಮೃತಪಟ್ಟವರು. ಇವರು ಚಾಣಕ್ಯಪುರಿಯ ಟೆಲಿಕಾಂ ಕಂಪೆನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಪಶೇರಾ ಗಡಿಯ ಬಳಿಯ ಫನ್ ಅಂಡ್ ಫುಡ್ ವಿಲೇಜ್ ಎಂಬ ಅಮ್ಯೂಸ್‌ಮೆಂಟ್ ಪಾರ್ಕ್ ನಲ್ಲಿ ಈ ಅಪಘಾತ ಸಂಭವಿಸಿದೆ.
ಪ್ರಿಯಾಂಕಾ ತನ್ನ ಭಾವಿ ಪತಿ ಅಖಿಲ್‌ರೊಂದಿಗೆ ಪಾರ್ಕ್‌ಗೆ ಬಂದಿದ್ದರು. ರೋಲರ್ ಕೋಸ್ಟರ್‌ನಲ್ಲಿ ಕುಳಿತಿದ್ದಾಗ, ಸ್ವಿಂಗ್ ಮೇಲಕ್ಕೆ ತಲುಪಿದೆ. ಈ ಸಂದರ್ಭ ಸ್ಟ್ಯಾಂಡ್ ಏಕಾಏಕಿ ಕುಸಿದು ಪ್ರಿಯಾಂಕಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಕೆಯ ಜೀವವನ್ನು ಉಳಿಸಲಾಗಲಿಲ್ಲ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ.
ಪ್ರಿಯಾಂಕಾ ಅವರ ಸಹೋದರ ಮೋಹಿತ್ ಅವರು, ಪಾರ್ಕಿನ ಅಧಿಕಾರಿಗಳ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪಾರ್ಕ್‌ನಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ. ಅಪಘಾತದ ಬಳಿಕ ಪ್ರಿಯಾಂಕಾರನ್ನು ಆಸ್ಪತ್ರೆಗೆ ತಡವಾಗಿ ಕರೆದೊಯ್ಯಲಾಯಿತು ಎಂದು ಕುಟುಂಬ ಆರೋಪಿಸಿದೆ.
ಅಪಘಾತದ ಬಳಿಕ ರೋಲರ್ ಕೋಸ್ಟರ್ ಒಳಗೊಂಡ ಪಾರ್ಕ್‌ನ ಒಂದು ಭಾಗವನ್ನು ನಿರ್ವಹಣೆಗಾಗಿ ಮುಚ್ಚಲಾಗಿದೆ ಎಂದು ಕುಟುಂಬವು ಹೇಳಿಕೆ ನೀಡಿದೆ. ಆದರೆ, ಈ ಘಟನೆಯ ಬಗ್ಗೆ ಉದ್ಯಾನವನದ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಿಯಾಂಕಾ ಮತ್ತು ನಿಖಿಲ್ ನಿಶ್ಚಿತಾರ್ಥ 2023ರ ಜನವರಿಯಲ್ಲಿ ನಡೆದಿದೆ. ಈ ಜೋಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಬೇಕಿತ್ತು. ಅಷ್ಟರಲ್ಲೇ ಪ್ರಿಯಾಂಕಾ ದುರಂತ ಸಾವಿಗೀಡಾಗಿದ್ದಾರೆ.