ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯನ್ನು ಕೊಲೆಗೈದು ಫ್ರಿಡ್ಜ್‌ನಲ್ಲಿ ಇಡುವುದಾಗಿ ಇಮೇಲ್ ಬೆದರಿಕೆ ಸಂದೇಶ
Thursday, April 24, 2025
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇಮೇಲ್ ಮೂಲಕ ಕಿಡಿಗೇಡಿಯೊಬ್ಬ ಜೀವ ಬೆದರಿಕೆಯೊಡ್ಡಿದ್ದಾನೆ. ಇಬ್ಬರನ್ನೂ ಹತ್ಯೆಗೈದು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಸಿ ಫ್ರಿಡ್ಜ್‌ನಲ್ಲಿ ಇಡುವುದಾಗಿ ಇಮೇಲ್ ಸಂದೇಶ ರವಾನಿಸಿದ್ದಾನೆ.
ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಂಧಾರ್ ರಜಪೂತ್ ಎಂಬ ಹೆಸರಿನ ಇಮೇಲ್ ವಿಳಾಸದಿಂದ ಈ ಸಂದೇಶ ರವಾನಿಸಲಾಗಿದೆ. ಸಂದೇಶ ರವಾನಿಸಿರುವ ವ್ಯಕ್ತಿಯನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕಿಡಿಗೇಡಿಗಳ ಕೃತ್ಯವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸಂದೇಶದಲ್ಲಿ ಇಬ್ಬರನ್ನೂ ಕೊಲೆ ಮಾಡಿ ಟ್ರಾಲಿ ಬ್ಯಾಗ್‌ಗೆ ತುಂಬಿ ಫ್ರಿಡ್ಜ್‌ನಲ್ಲಿ ಇಡುವುದಾಗಿ ಹೇಳಿರುವುದು ಈಗಿನ ಟ್ರೆಂಡನ್ನು ತೋರಿಸಿದೆ.
ಇದೇ ಇಮೇಲ್ ಸಂದೇಶವನ್ನು ಗೃಹ ಸಚಿವರು, ಪೊಲೀಸ್ ಕಮಿಷನರ್ ಅವರಿಗೂ ಕಳಿಸಲಾಗಿದೆ. ಅಲ್ಲದೆ, ರಾಮಪುರದ ಪ್ರಭಾಕರ್‌ಗೆ ಒಂದು ಕೋಟಿ ರೂ. ಸಾಲ ಕೊಟ್ಟಿದ್ದೇನೆ. ಆದಷ್ಟು ಬೇಗ ಸಾಲ ತೀರಿಸಲು ಹೇಳಿ. ಪ್ರಭಾಕರ್ ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಹಣ ಇಟ್ಟಿದ್ದಾನೆ. ಆತನಿಗೆ ಇಬ್ಬರು ಮಕ್ಕಳಿದ್ದು ಒಬ್ಬನಿಗೆ ಮದುವೆ ಮಾಡಿಸಿದ್ದಾನೆ. ಆತನಿಗೆ ಆದಾಯ ಮೂಲವಿಲ್ಲ. ಅವನನ್ನು ಕೂಡ ಕೊಲ್ಲುತ್ತೇನೆ ಎಂಬುದಾಗಿ ಅದೇ ಇಮೇಲ್ ಸಂದೇಶದಲ್ಲಿ ಹೇಳಿದ್ದಾನೆ.