
ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಹತ್ಯೆ: ನಿವೃತ್ತ ಡಿಜಿಪಿ ಹತ್ಯೆಗೆ ಬೆಚ್ಚಿ ಬಿದ್ದ ರಾಜಧಾನಿ!
ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಹತ್ಯೆ: ನಿವೃತ್ತ ಡಿಜಿಪಿ ಹತ್ಯೆಗೆ ಬೆಚ್ಚಿ ಬಿದ್ದ ರಾಜಧಾನಿ!
ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ(ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ ಅವರನ್ನು ಹರಿತ ಆಯುಧದಿಂದ ಹತ್ಯೆ ಮಾಡಲಾಗಿದೆ.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ಇರುವ ಮನೆಯಲ್ಲೇ ಅವರನ್ನು ಹತ್ಯೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಪ್ರಕಾಶ್ ಅವರ ಮೃತ ದೇಹ ಪತ್ತೆಯಾಗಿದೆ. ಈ ಘಟನೆಯಿಂದ ರಾಜಧಾನಿ ಬೆಂಗಳೂರು ಬೆಚ್ಚಿ ಬಿದ್ದಿದೆ.
ಪತ್ನಿ-ಮಗಳಿಂದಲೇ ಕೃತ್ಯ!?
ಪತಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಪತ್ನಿ ಪಲ್ಲವಿ, ಪೊಲೀಸರು ಮನೆಗೆ ತಲುಪುವಷ್ಟರಲ್ಲಿ ಮನೆಯ ಮೂರನೇ ಮಹಡಿಯಲ್ಲಿನ ಕೊಠಡಿ ಸೇರಿಕೊಂಡಿದ್ದರು. ಮಗಳೊಂದಿಗೆ ಕೊಠಡಿ ಬಾಗಿಲು ಹಾಕಿಕೊಂಡಿದ್ದು, ಹೊರಬರಲು ನಿರಾಕರಿಸುತ್ತಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ ಪತ್ನಿ ಮತ್ತು ಮಗಳು ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಂ ಪ್ರಕಾಶ್ ಅವರ ಕೊಲೆಗೆ ಬಳಸಿರುವ 2 ಚಾಕು ಮತ್ತು ಮೃತದೇಹದ ಪಕ್ಕದಲ್ಲಿ ಇದ್ದ ಖಾರದ ಪುಡಿ ಬಾಟಲಿಯನ್ನು ಪೊಲೀಸರು ಸ್ಥಳ ಮಹಜರು ವೇಳೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಎಚ್‌ಎಸ್‌ಆರ್ ಲೇ ಔಟ್‌ನಲ್ಲಿ ವಾಸವಾಗಿದ್ದ ಪ್ರಕಾಶ್ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ನೆಲ ಮಹಡಿಯಲ್ಲಿ ಓಂ ಪ್ರಕಾಶ್ ಮತ್ತು ಪತ್ನಿ ಪಲ್ಲವಿ ವಾಸವಾಗಿದ್ದರೆ, ಮೊದಲ ಮಹಡಿಯಲ್ಲಿ ಮಗ ಮತ್ತು ಸೊಸೆ ವಾಸವಾಗಿದ್ದರು. ಎರಡು ಮತ್ತು ಮೂರನೇ ಮಹಡಿಯಲ್ಲಿ ಮಗಳು ಕೃತಿ ನೆಲೆಸಿದ್ದರು.
ಪತ್ನಿ ಕೊಲೆಗೆ ಯತ್ನಿಸಿದ್ದ ಪ್ರಕಾಶ್?
ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪತಿ ಓಂ ಪ್ರಕಾಶ್ ಪದೇ ಪದೇ ಪಿಸ್ತೂಲ್ ತಂದು ನನ್ನನ್ನು ಮತ್ತು ನನ್ನ ಮಗಳನ್ನು ಶೂಟ್ ಮಾಡುವುದಾಗಿ ಬೆದರಿಸುತ್ತಿದ್ದರು. ಭಾನುವಾರ ಸಹ ಬೇರೆ ಬೇರೆ ವಿಚಾರಕ್ಕೆ ಗಲಾಟೆ ಆಯಿತು. ಗಲಾಟೆ ವಿಕೋಪಕ್ಕೆ ತಿರುಗಿ ನಮ್ಮ ಕೊಎಲಗೆ ಯತ್ನಿಸಿದರು.
ಆಗ ಅವರ ಮುಖಕ್ಕೆ ಖಾರದ ಪುಡಿ ಎರಚಿದೆವು, ಅಡುಗೆ ಎಣ್ಣೆ ಸುರಿದೆವು. ಬಳಿಕ ಕೈ-ಕಾಲು ಕಟ್ಟಿ ಅಡುಗೆ ಮನೆಯ ಚಾಕುವಿನಿಂದ ಚುಚ್ಚಿದೆವು. ರಕ್ತಸ್ರಾವದಿಂದ ಪತಿ ಮೃತಪಟ್ಟರು ಎಂದು ಪಲ್ಲವಿ ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ.