-->
ಮಂಗಳೂರು: ಚಿನ್ನಾಭರಣ ಖರೀದಿ ನೆಪದಲ್ಲಿ ಮಹಿಳೆಯಿಂದ ವಂಚನೆ- ವಂಚಕಿ ಮಾತು ನಂಬಿ ಕೆಟ್ಟ ಜ್ಯುವೆಲ್ಲರಿ ಶಾಪ್ ಮಾಲಕ

ಮಂಗಳೂರು: ಚಿನ್ನಾಭರಣ ಖರೀದಿ ನೆಪದಲ್ಲಿ ಮಹಿಳೆಯಿಂದ ವಂಚನೆ- ವಂಚಕಿ ಮಾತು ನಂಬಿ ಕೆಟ್ಟ ಜ್ಯುವೆಲ್ಲರಿ ಶಾಪ್ ಮಾಲಕ


ಮಂಗಳೂರು: ಮಹಿಳೆಯೊಬ್ಬಳು ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್ ಮಾಲಕನಿಗೆ ಹಣ ಪಾವತಿಸದೆ ವಂಚನೆ ಮಾಡಿರುವ ಪ್ರಕರಣ ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ಫರೀದಾ ಎಂಬಾಕೆ ಪ್ರಕರಣದ ಆರೋಪಿತೆ.

ನಗರದ ಕಾವೂರಿನಲ್ಲಿರುವ ಚಿನ್ನದ ಅಂಗಡಿಯ ಮಾಲಕರಿಗೆ ಕರೆ ಮಾಡಿದ ಫರೀದಾ ಮಗು ನಾಮಕರಣಕ್ಕೆ ಚಿನ್ನದ ಬ್ರಾಸ್‌ಲೆಟ್, ಚೈನ್, ಎರಡು ಉಂಗುರ ಬೇಕಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಡಿಸೈನ್ ಕಳುಹಿಸಿದಲ್ಲಿ, ನಾನು ಅದರಲ್ಲೇ ಒಡವೆಗಳನ್ನು ಆಯ್ಕೆ ಮಾಡಿ ತಮಗೆ ಹಣ ನೆಫ್ಟ್ ಮಾಡುತ್ತೇನೆ ಎಂದಿದ್ದಾಳೆ. 

ಅದರಂತೆ ಅಂಗಡಿ ಮಾಲಕ ಒಡವೆಗಳ ಡಿಸೈನ್ ಅನ್ನು ವಾಟ್ಸ್ಆ್ಯಪ್ ಮಾಡಿದ್ದಾರೆ. ಫರೀದಾ "ಒಂದು ಚೈನ್, ಒಂದು ಬ್ರಾಸ್‌ಲೈಟ್ ಮತ್ತು ಎರಡು ಉಂಗುರಗಳನ್ನು ಆಯ್ಕೆ ಮಾಡಿ ಮರುದಿನ ಕರೆ ಮಾಡಿ ಹಣ ನೆಫ್ಟ್ ಮಾಡುತ್ತೇನೆ. ಆಯ್ಕೆ ಮಾಡಿದ ಚಿನ್ನವನ್ನು ಹಿಯಾಜ್ ಕೆ.ಎಸ್. ಎಂಬ ಯುವಕನಲ್ಲಿ ಕಳುಹಿಸಿಕೊಡಿ' ಎಂದಿದ್ದಾಳೆ.

ಅದರಂತೆಯೇ ಹಿಯಾಜ್‌ನನ್ನು ಅಂಗಡಿಗೆ ಕಳುಹಿಸಿ ಬ್ಯಾಂಕ್‌ನ 1.36 ಲಕ್ಷ ರೂ. ಮೊತ್ತದ ಡಿಪಾಸಿಟ್ ಪೇ ಸ್ಲಿಪ್ ಅನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಳು. ಆದರೆ ಹಣ ಮಾತ್ರ ಮಾಲಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಬಗ್ಗೆ ಅವರು ತಿಳಿಸಿದಾಗ ಫರೀದಾ "ಸರ್ವರ್ ಡೌನ್ ಇದೆ. 30 ನಿಮಿಷಗಳಲ್ಲಿ ಜಮೆಯಾಗುತ್ತದೆ. ಚಿನ್ನವನ್ನು ಕೊಡಿ' ಎಂದಿದ್ದಾಳೆ. ಅದರಂತೆ ನಂಬಿದ ಮಾಲಕರು ಚಿನ್ನಾಭರಣಗಳನ್ನು ಕಳುಹಿಸಿಕೊಟ್ಟಿದ್ದರು. ಅದೇ ದಿನ ಸಂಜೆ ಮಾಲಕರು ಫರೀದಾಗೆ ಕರೆ ಮಾಡಿ ಹಣ ಬಂದಿಲ್ಲ ಎಂದರು. ಆಗಲೂ ಸರ್ವ‌ರ್ ಸಮಸ್ಯೆ ಇರಬಹುದು. ನಾಳೆ ಅಂಗಡಿಗೆ ಬಂದು ಹಣವನ್ನು ನೀಡುತ್ತೇನೆ ಎಂದು ಉತ್ತರಿಸಿದ್ದಳು. 

ಮರುದಿನ ಹಣ ಕೇಳಿದಾಗ ನಿಮಗೇನು ಅವಸರ, ಕೊಡುತ್ತೇನೆ ಎಂದು ಬೆದರಿಸುವ ರೀತಿ ಮಾತನಾಡಿದ್ದಾಳೆ. ಮಾಲಕರು ಬರಬೇಕಾದ ಹಣವನ್ನು ಪದೇ ಪದೆ ಕೇಳಿದಾಗ ಫರೀದಾ ಕೊಡಬೇಕಾದ 1.36 ಲಕ್ಷ ರೂ. ಹಣವನ್ನು ನೀಡದೆ ಬೆದರಿಕೆ ಹಾಕಿದಳು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರೀದಾ ಇದೇ ರೀತಿ ವಂಚಿಸಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಇತ್ತೀಚೆಗೆ ಈಕೆಯ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಾಗ ಕೊಂಚಾಡಿ, ಕಿನ್ನಿಗೋಳಿ, ಶಿರ್ವ, ಮೂಡುಬಿದಿರೆ, ಗುರುಪುರ ಮೊದಲಾದ ಕಡೆಗಳಲ್ಲಿ ಇದೇ ರೀತಿ ಮಾತಿನ ಮೋಡಿ ಮಾಡಿ ನಂಬಿಸಿ ಮೋಸದಿಂದ ಚಿನ್ನವನ್ನು ಲಪಟಾಯಿಸಿಕೊಂಡು ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article