ಮಂಗಳೂರು: ಗ್ಯಾಂಗ್‌ರೇಪ್ ಆರೋಪ- ಮೂವರು ವಶಕ್ಕೆ
Thursday, April 17, 2025
ಮಂಗಳೂರು: ನಗರಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಲ್ಕಿ ನಿವಾಸಿ, ಆಟೋ ಚಾಲಕ ಪ್ರಭುರಾಜ್(38), ಕುಂಪಲ ನಿವಾಸಿ, ಇಲೆಕ್ಟ್ರಿಷಿಯನ್ ಮಿಥುನ್(30) ಹಾಗೂ ಮಂಗಳೂರು ನಿವಾಸಿ ಮಣಿ ಎಂಬವರು ಆರೋಪಿಗಳು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಲ್ ಈ ಬಗ್ಗೆ ಮಾತನಾಡಿ, ಬುಧವಾರ ತಡರಾತ್ರಿ ಕಲ್ಲಾಪುವಿನ ರಾಣಿಪುರದ ಮನೆಯೊಂದರ ಬಾಗಿಲು ಬಡಿದು ರಕ್ಷಣೆ ಕೋರಿದ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆ ಸಂತ್ರಸ್ತೆ ಹೇಳಿಕೆಯಲ್ಲಿ ರಾತ್ರಿ ಮೂವರು ತನಗೆ ಮದ್ಯಪಾನ ಮಾಡಿಸಿದ್ದಾರೆ. ಆ ಬಳಿಕ ತನಗೆ ಪ್ರಜ್ಞೆ ತಪ್ಪಿದ್ದು, ಪ್ರಜ್ಞೆ ಬಂದಾಗ ತನ್ನ ಒಳಉಡುಪು ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಆಗ ತಾನು ಕೂಗಾಡಲು ಆರಭಿಸಿದಾಗ ತನ್ನನ್ನು ಅಲ್ಲೇ ಬಿಟ್ಟು ಅವರು ಪರಾರಿಯಾಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದವಳಾದ ಯುವತಿ ಕಳೆದೆರಡು ವರ್ಷಗಳಿಂದ ಕೇರಳದ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಗೆಳೆಯನೊಂದಿಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಗೆಳೆಯನೊಂದಿಗೆ ಜಗಳವಾಗಿ ಆತ ಈಕೆಯ ಮೊಬೈಲ್ ಹಾನಿ ಮಾಡಿ ಹೋಗಿದ್ದ. ಆದ್ದರಿಂದ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. ಈ ವೇಳೆ 5-6 ಗಂಟೆಗಳ ಕಾಲ ಆಟೋ ಡ್ರೈವರ್ ಪ್ರಭುರಾಜ್‌ನೊಂದಿಗೆ ಇದ್ದು, ಅವನೊಂದಿಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದಾನೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಬಳಿಕ ಆಕೆ ರಾತ್ರಿ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ತಿಳಿಸಿದ್ದಾಳೆ. ಆದರೆ ಆತ ರೈಲ್ವೇ ನಿಲ್ದಾಣಕ್ಕೆ ಹೋಗದೇ ತನ್ನಿಬ್ಬರು ಸ್ನೇಹಿತರೊಂದಿಗೆ ಬೇರೊಂದು ಜಾಗಕ್ಕೆ ಆಕೆಯನ್ನು ಕರೆದೊಯ್ಯುತ್ತಾನೆ. ಅಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿದ್ದಾರೆ. ಇದರಿಂದ ಆಕೆಗೆ ಪ್ರಜ್ಞೆ ತಪ್ಪಿದೆ. ಪ್ರಜ್ಞೆ ಬಂದಾಗ ಆಕೆಗೆ ಮೂವರು ಅತ್ಯಾಚಾರ ಎಸಗಿರುವ ಶಂಕೆ ಮೂಡಿದೆ. ಯುವತಿ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾಳೆ. ಸದ್ಯ ಈ ಪ್ರಕರಣದ ತನಿಖೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕವೇ ಅತ್ಯಾಚಾರ ಆಗಿದೆಯೋ ಇಲ್ಲವೇ ಎನ್ನುವುದನ್ನು ದಢಪಡಿಸಲಾಗುವುದು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಲ್ ಹೇಳಿದ್ದಾರೆ.