ಉಳ್ಳಾಲ: ನಿರ್ಜನ ಪ್ರದೇಶದಲ್ಲಿ ತಡರಾತ್ರಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ- ಗ್ಯಾಂಗ್‌ರೇಪ್?
Thursday, April 17, 2025
ಉಳ್ಳಾಲ: ಇಲ್ಲಿನ ಕಲ್ಲಾಪು ಬಳಿಯ ರಾಣಿಪುರ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ತಡರಾತ್ರಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆಯಾಗಿದ್ದು, ಈಕೆಯ ಮೇಲೆ ಗ್ಯಾಂಗ್‌ರೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.
ತಡರಾತ್ರಿ12.30ಸುಮಾರಿಗೆ ಯುವತಿ ಮನೆಯೊಂದರ ಬಾಗಿಲು ಬಡೆದಿದ್ದು, ಮನೆಯವರು ನೋಡಿದಾಗ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಸರಿಯಾಗಿ ನಿಲ್ಲಲೂ, ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಮನೆಮಂದಿ ನೀರು ಕೊಟ್ಟ ಬಳಿಕ ಆಕೆ ಮಾತನಾಡುವಷ್ಟು ಶಕ್ತಳಾಗಿದ್ದಾಳೆ. ಬಳಿಕ ಮೂವರು ರಿಕ್ಷಾದಲ್ಲಿ ತಂದು ನಿರ್ಜನ ಸ್ಥಳದಲ್ಲಿ ಬಿಟ್ಟಿದ್ದಾರೆ ಎಂದು ಆಕೆ ತಿಳಿಸಿದ್ದಾಳೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಯುವತಿ ಮೈಮೇಲೆ ಗಾಯದ ಗುರುತು ಪತ್ತೆಯಾಗಿದ್ದು, ಬಟ್ಟೆಯೂ ಅಸ್ತವ್ಯಸ್ತವಾಗಿತ್ತು. ಜೊತೆಗೆ ಗಾಯದ ಗುರುತು ಮೂಡಿದ್ದು, ಸಾಮೂಹಿಕ ಅತ್ಯಾಚಾರದ ಶಂಕೆ ವ್ಯಕ್ತವಾಗಿದೆ. ತಕ್ಷಣ ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿನ ಹೊಳೆ ಬದಿಗೆ, ನಿರ್ಜನ ಪ್ರದೇಶಕ್ಕೆ ದಿನನಿತ್ಯ ಗಾಂಜಾ, ಅಮಲು ವ್ಯಸನಿಗಳು ಬರುತ್ತಿರುತ್ತಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಲ್ಲಿ ಇಂತಹ ಘಟನೆಗಳು ನಡೆಯುವುದು ತಪ್ಪುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.